ಪಾವೋ ನುರ್ಮಿ ಗೇಮ್ಸ್‌ನ ಜಾವೆಲಿನ್ ಥ್ರೋನಲ್ಲಿ 85.97 ಮೀ. ದೂರಕ್ಕೆ ಎಸೆದ ನೀರಜ್ ಮೊದಲ ಸ್ಥಾನ ಗಳಿಸಿದರು. 2, 3ನೇ ಸ್ಥಾನ ಫಿನ್‌ಲ್ಯಾಂಡ್ ಅಥ್ಲೀಟ್‌ಗಳ ಪಾಲಾಯಿತು.
ಟುರ್ಕು(ಫಿನ್‌ಲ್ಯಾಂಡ್): ಪಾವೋ ನುರ್ಮಿ ಗೇಮ್ಸ್‌ನ ಜಾವೆಲಿನ್ ಥ್ರೋನಲ್ಲಿ ಹಾಲಿ ವಿಶ್ವ ಹಾಗೂ ಒಲಿಂಪಿಕ್ಸ್ ಚಾಂಪಿಯನ್, ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದಾರೆ. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ. ಸಣ್ಣ ಪ್ರಮಾಣದ ಗಾಯದಿಂದ ಚೇತರಿಸಿಕೊಂಡ ಬಳಿಕ ಫಿಟ್ನೆಸ್ ಪರೀಕ್ಷೆಗಾಗಿ ನೀರಜ್ ಈ ಕೂಟದಲ್ಲಿ ಪಾಲ್ಗೊಂಡಿದ್ದರು.
ಪಾವೋ ನುರ್ಮಿ ಗೇಮ್ಸ್‌ನ ಜಾವೆಲಿನ್ ಥ್ರೋನಲ್ಲಿ 85.97 ಮೀ. ದೂರಕ್ಕೆ ಎಸೆದ ನೀರಜ್ ಮೊದಲ ಸ್ಥಾನ ಗಳಿಸಿದರು. 2, 3ನೇ ಸ್ಥಾನ ಫಿನ್‌ಲ್ಯಾಂಡ್ ಅಥ್ಲೀಟ್‌ಗಳ ಪಾಲಾಯಿತು. 84.19 ಮೀ. ದೂರಕ್ಕೆ ಎಸೆದ ಟೋನಿ ಕೆರನೆನ್, 81.30 ಮೀ. ದೂರಕ್ಕೆ ಎಸೆದ ಓಲಿವರ್ ಹೆಲಾಂಡರ್ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರು.
10 ದಿನದಲ್ಲಿ ಬಾಕಿ ವೇತನ ಪಾವತಿಸದಿದ್ರೆ ಕೇಸ್: ಸ್ಟಿಮಾಕ್
ನವದೆಹಲಿ: ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ 3ನೇ ಸುತ್ತಿಗೆ ಭಾರತ ತಂಡವನ್ನು ಕೊಂಡೊಯ್ಯಲು ವಿಫಲವಾದ ಕಾರಣ ಪ್ರಧಾನ ಕೋಚ್ ಹುದ್ದೆಯಿಂದ ಸೋಮವಾರ ವಜಾಗೊಂಡ ಇಗೊರ್ ಸ್ಟಿಮಾಕ್, ತಮಗೆ ಬರಬೇಕಿರುವ ಬಾಕಿ ವೇತನವನ್ನು 10 ದಿನಗಳೊಳಗೆ ಪಾವತಿಸುವಂತೆ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್)ಗೆ ಆಗ್ರಹಿಸಿದ್ದಾರೆ.
ಒಂದು ವೇಳೆ ಬಾಕಿ ವೇತನ ಪಾವತಿಯಾಗದೆ ಇದ್ದರೆ, ಫಿಫಾಗೆ ದೂರು ನೀಡಿ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಎಚ್ಚರಿಸಿದ್ದಾರೆ. ತಮ್ಮನ್ನು ದಿಢೀರನೆ ವಜಾ ಮಾಡಿದ್ದಕ್ಕೆ ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ವಿರುದ್ಧ ಹರಿಹಾಯ್ದಿರುವ ಸ್ಟಿಮಾಕ್, ಇದೊಂದು ವೃತ್ತಿಪರವಲ್ಲದ ನಡೆ ಎಂದಿದ್ದಾರೆ. ಇದೇ ವೇಳೆ ಭಾರತ ತಂಡದ ಕೋಚ್ ಆಗಿ ನೇಮಕಗೊಂಡ ಬಳಿಕ ತಮ್ಮ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ ಎಂದೂ ಅವರು ಅಳಲು ತೋಡಿಕೊಂಡಿದ್ದಾರೆ.
ಒಲಿಂಪಿಕ್ಸ್: ಇದೇ ಮೊದಲ ಸಲ ಭಾರತ ತಂಡಕ್ಕೆ ನಿದ್ರೆ ಸಲಹೆಗಾರರ ನೆರವು!
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೆಲವೇ ದಿನಗಳು ಬಾಕಿ ಇದ್ದು, ಭಾರತದ ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ನಿದ್ರೆ ಸಲಹೆಗಾರರ ನೆರವು ದೊರೆಯಲಿದೆ. ಒಲಿಂಪಿಕ್ಸ್ ಕ್ರೀಡಾ ಗ್ರಾಮಗಳಲ್ಲಿ ಫ್ಯಾನ್ ಅಥವಾ ಎಸಿ ಇರುವುದಿಲ್ಲ ಎನ್ನಲಾಗಿದ್ದು, ಈ ಕಾರಣಕ್ಕೆ ಅಥ್ಲೀಟ್‌ಗಳು ಸರಿಯಾಗಿ ನಿದ್ದೆ ಮಾಡಲು ಪರದಾಡಿದ ಅನೇಕ ಉದಾಹರಣೆಗಳಿವೆ. ನಿದ್ದೆ ಕೊರತೆ ಅಥ್ಲೀಟ್‌ಗಳ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ), ನಿದ್ರೆ ಸಲಹೆಗಾರರಾದ ಡಾ.ಮೋನಿಕಾ ಶರ್ಮಾ ಅವರ ಸೇವೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದು, ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಭಾರತ ತಂಡದೊಂದಿಗೆ ಸಲಹೆಗಾರರು ಇರಲಿದ್ದಾರೆ.
ಇನ್ನು ಒಲಿಂಪಿಕ್ಸ್ ಸಮಯದಲ್ಲಿ ಕ್ರೀಡಾಪಟುಗಳು ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಲು ವಿಶೇಷ ಸ್ಲೀಪಿಂಗ್ ಬ್ಯಾಗ್, ಸ್ಲೀಪಿಂಗ್ ಪಾಡ್‌ಗಳನ್ನು ಒದಗಿಸಲು ಐಒಎ ನಿರ್ಧರಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಇಂದಿನಿಂದ ಜೋಡಿಯಾದಲ್ಲಿ ರಾಷ್ಟ್ರೀಯ ಕಯಾಕಿಂಗ್ ಕೂಟ
ಬೆಂಗಳೂರು: ಇದೇ ಮೊದಲ ಬಾರಿಗೆ ಕರ್ನಾಟಕ, ರಾಷ್ಟ್ರೀಯ ಕಯಾಕ್ ಕ್ರಾಸ್ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸುತ್ತಿದ್ದು, ಕೂಟವು ಜೂ.19ರಿಂದ 21ರ ವರೆಗೂ ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿ ನಡೆಯಲಿದೆ. ಕೂಟದಲ್ಲಿ ರಾಜ್ಯದ 27 ಸ್ಪರ್ಧಿಗಳು ಸೇರಿ ಒಟ್ಟು 10 ರಾಜ್ಯಗಳ ಸುಮಾರು 80ರಿಂದ 100 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
