ತಮಿಳುನಾಡಿನ ರಂಜಿತ್ ಎಂಬ ಅಭಿಮಾನಿಯ ಬಯಕೆಯನ್ನು ಈಡೇರಿಸಿದ ನೀರಜ್ ಚೋಪ್ರಾ, ಬೆಂಗಳೂರಿನಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಎಸೆತ ಸ್ಪರ್ಧೆಗೆ ವಿಐಪಿ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಜುಲೈ 5 ರಂದು ನಡೆಯಲಿರುವ ಈ ಕ್ರೀಡಾಕೂಟ.
ಬೆಂಗಳೂರು: ಜು.5ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಎಸೆತ ಸ್ಪರ್ಧೆ ನೋಡಬೇಕೆಂಬ ಅಭಿಮಾನಿಯ ಬಯಕೆಯನ್ನು ನೀರಜ್ ಚೋಪ್ರಾ ಈಡೇರಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋಪಟು, ಮತ್ತೊಮ್ಮೆ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.
ತಮಿಳುನಾಡಿನ ರಂಜಿತ್ ಎಂಬವರು ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬಯಕೆ ವ್ಯಕ್ತಪಡಿಸಿದ್ದರು. ‘ಯಾರಾದರೂ ನನಗೆ ₹2000 ನೀಡಿದರೆ ಕೊಯಂಬತ್ತೂರಿನಿಂದ ಬೆಂಗಳೂರಿಗೆ ಹೋಗಿ ನೀರಜ್ ಚೋಪ್ರಾ ಕ್ಲಾಸಿಕ್ ಸ್ಪರ್ಧೆ ನೋಡುತ್ತೇನೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನೀರಜ್ ಚೋಪ್ರಾ, ‘ಹಾಯ್ ರಂಜಿತ್, ಎನ್‌ಸಿ ಕ್ಲಾಸಿಕ್‌ಗೆ ಬರುವ ನಿಮ್ಮನ್ನು ಬೆಂಗಳೂರಿನಲ್ಲಿ ಸಂಪೂರ್ಣ ವಿವಿಐಪಿ ಸೌಲಭ್ಯಗಳು ಕಾಯುತ್ತಿದೆ. ಕ್ರೀಡಾಂಗಣದ ಸಮೀಪದಲ್ಲೇ ಇರುವ ಪ್ರಸಿದ್ಧ ಹೋಟೆಲ್‌ನಲ್ಲಿ ನೀವು ಉಳಿದುಕೊಳ್ಳಲಿದ್ದೀರಿ’ ಎಂದು ಭರವಸೆ ನೀಡಿದ್ದಾರೆ.
ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಯು ಈ ಮೊದಲು ಮೇ 24ರಂದು ಆಯೋಜನೆಗೊಂಡಿತ್ತು. ಅದೇ ವೇಳೆಯಲ್ಲಿ ಪೆಹಲ್ಗಾಮ್ ಘಟನೆಯ ಬಳಿಕ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಉದ್ಘಿಗ್ನತೆ ಏರ್ಪಟ್ಟಿತ್ತು. ಹೀಗಾಗಿ ಈ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಜುಲೈ 05ಕ್ಕೆ ಮುಂದೂಡಲಾಗಿತ್ತು. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಥಾಮಸ್ ರೋಹ್ಲರ್, ಆಂಡರ್‌ಸನ್ ಪೀಟರ್ಸ್ ಸೇರಿದಂತೆ ಹಲವು ತಾರಾ ಜಾವೆಲಿನ್ ಥ್ರೋಪಟುಗಳು ಪಾಲ್ಗೊಳ್ಳಲಿದ್ದಾರೆ.
ಸದ್ಯ ಭಾರತದ ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಭರ್ಜರಿ ಫಾರ್ಮ್‌ನಲ್ಲಿದ್ದು, ಕೇವಲ 4 ದಿನಗಳ ಅಂತರದಲ್ಲಿ ಎರಡು ಪ್ರತಿಷ್ಠಿತ ಕೂಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ನೀರಜ್ ಜೂ.20ರಂದು ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಅಗ್ರಸ್ಥಾನಿಯಾಗಿದ್ದರು. ಕೇವಲ 4 ದಿನಗಳ ಅಂತರದಲ್ಲಿ ಗೋಲ್ಡನ್ ಸ್ಪೈಕ್‌ನಲ್ಲಿ ಸ್ಪರ್ಧಿಸಿ ಚಾಂಪಿಯನ್ ಆಗಿದ್ದರು
ವಿಂಬಲ್ಡನ್ ಟೆನಿಸ್: ಆಲ್ಕರಜ್‌ಗೆ ಫಾಗ್ನಿನಿ ಮೊದಲ ಸವಾಲು
ಲಂಡನ್: ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ ಸೋಮವಾರ ಆರಂಭಗೊಳ್ಳಲಿದ್ದು, ಶುಕ್ರವಾರ ಡ್ರಾ ಪ್ರಕಟಗೊಂಡಿತು. ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರ್ ಮೊದಲ ಸುತ್ತಿನಲ್ಲಿ ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ ಆಡಲಿದ್ದಾರೆ. ಅವರಿಗೆ ಫೈನಲ್‌ನಲ್ಲಿ ವಿಶ್ವ ನಂ.1 ಯಾನಿಕ್ ಸಿನ್ನರ್ ಸಂಭಾವ್ಯ ಎದುರಾಗಿಯಾಗಿದ್ದಾರೆ. ಇಟಲಿಯ ಸಿನ್ನರ್‌ಗೆ ಮೊದಲ ಸುತ್ತಿನಲ್ಲಿ ತಮ್ಮದೇ ದೇಶದ ಲ್ಯೂಕಾ ನಾರ್ಡಿ ಸವಾಲು ಎದುರಾಗಲಿದೆ. 24 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್ ಜೋಕೋವಿಚ್ ಅವರು ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ ಸೆಣಸುವ ಮೂಲಕ ಟೂರ್ನಿಗೆ ಕಾಲಿಡಲಿದ್ದಾರೆ.
ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಕ್ರೇಜಿಕೋವಾ, ಫಿಲಿಪ್ಪೀನ್ಸ್‌ನ ಅಲೆಕ್ಸಾಂಡ್ರಾ ಎಲಾ ವಿರುದ್ಧ ಆಡಲಿದ್ದಾರೆ. ವಿಶ್ವ ನಂ.1 ಅರೈನಾ ಸಬೆಲಂಕಾಗೆ ಕ್ವಾರ್ಟರ್ ಫೈನಲ್‌ನಲ್ಲಿ ಮ್ಯಾಡಿಸನ್ ಕೀಸ್, ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ಗೆ 2022ರ ಚಾಂಪಿಯನ್ ಎಲೆನಾ ರಬೈಕೆನಾ ಸಂಭಾವ್ಯ ಎದುರಾಳಿಯಾಗಿದ್ದಾರೆ.
ಹಾಕಿ: ಸತತ 6 ಪಂದ್ಯ ಸೋತಿರುವ ಭಾರತಕ್ಕೆ ಇಂದು ಚೀನಾ ಸವಾಲು
ಬರ್ಲಿನ್(ಜರ್ಮನಿ): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಸತತ 6 ಪಂದ್ಯಗಳಲ್ಲಿ ಸೋಲನುಭವಿಸಿರುವ ಭಾರತ ಮಹಿಳಾ ತಂಡ ಶನಿವಾರ ಹಾಗೂ ಭಾನುವಾರ ಚೀನಾ ವಿರುದ್ಧ ಸೆಣಸಾಡಲಿದೆ. ಭಾರತ ತಂಡ ಕೊನೆ 6 ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಅರ್ಜೆಂಟೀನಾ ಹಾಗೂ ಬೆಲ್ಜಿಯಂ ವಿರುದ್ಧ ಸೋಲನುಭವಿಸಿದೆ. ತಂಡ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಗೆದ್ದಿದೆ. 10 ಅಂಕಗಳೊಂದಿಗೆ ತಂಡ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಪ್ರೊ ಲೀಗ್‌ನಿಂದ ಹಿಂಬಡ್ತಿ ಪಡೆಯುವ ಆತಂಕದಲ್ಲಿರುವ ತಂಡ, ಸುಧಾರಿತ ಪ್ರದರ್ಶನ ನೀಡಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಅತ್ತ ಚೀನಾ ತಂಡ 14 ಪಂದ್ಯಗಳ ಪೈಕಿ 6ರಲ್ಲಿ ಗೆದ್ದಿದ್ದು, 22 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.
