ರಾಜ್ಯ ಈಜು ಸಂಸ್ಥೆ ಮುಖ್ಯಸ್ಥ ಜಗದಾಳೆ ನಿಧನ
ಕೆಲ ದಿನಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆ ಸೇರಿದ್ದ ಜಗದಾಳೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಗುರುವಾರ ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಜಗದಾಳೆ ಅವರ ಅಂತ್ಯಕ್ರಿಯೆ ನೇರವೇರಿತು.
ಬೆಂಗಳೂರು(ಮೇ.11): ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಮುಖ್ಯಸ್ಥ ಆರ್. ನೀಲಕಂಠ ರಾವ್ ಜಗದಾಳೆ ಗುರುವಾರ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ. ಮೃತರಿಗೆ 67 ವರ್ಷ ವಯಸ್ಸಾಗಿತ್ತು.
ಕೆಲ ದಿನಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆ ಸೇರಿದ್ದ ಜಗದಾಳೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಗುರುವಾರ ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಜಗದಾಳೆ ಅವರ ಅಂತ್ಯಕ್ರಿಯೆ ನೇರವೇರಿತು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ರಾಜ್ಯದಲ್ಲಿ ಈಜು ಕ್ರೀಡೆಗೆ ನಾಂದಿ ಹಾಡಿದ್ದ ಜಗದಾಳೆ ಅವರು, ರಾಜ್ಯ ಈಜು ಸಂಸ್ಥೆಯನ್ನು 3 ಅವಧಿಗೆ ಮುನ್ನಡೆಸಿದ್ದಾರೆ. ಜಗದಾಳೆ ಅವರ ಅಧಿಕಾರವಧಿಯಲ್ಲಿ ರಾಜ್ಯ ಈಜು ಕ್ರೀಡೆಗೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಸಿಗಲು ಇವರ ಕೊಡುಗೆ ಅಪಾರ. ಉದ್ಯಮಿಯಾಗಿದ್ದ ಜಗದಾಳೆ ಅವರು ಬಿಡುವಿಲ್ಲದಿದ್ದರೂ ಈಜು ಕ್ರೀಡೆಯ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು.
ಬಸವನಗುಡಿ ಈಜು ಕೇಂದ್ರದ (ಬಿಎಸಿ) ಸಂಸ್ಥಾಪಕರಾದ ಜಗದಾಳೆ 3 ದಶಕಕ್ಕೂ ಹೆಚ್ಚು ಕಾಲ ಈ ಸಂಸ್ಥೆಯನ್ನು ಬೆಳೆಸಿದರು. ಅನೇಕ ಈಜುಪಟು, ಕೋಚ್‌ಗಳು ವೃತ್ತಿಬದುಕು ಕಟ್ಟಿಕೊಳ್ಳಲು ಜಗದಾಳೆ ನೆರವಾಗಿದ್ದಾರೆ. ರಾಜ್ಯದಲ್ಲಿ ಈಜು ಕ್ರೀಡೆಗೆ ನೀಡಿದ ಪ್ರೋತ್ಸಾಹದಿಂದಾಗಿ ಅವರಿಗೆ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಮತ್ತು ಕೆಂಪೇಗೌಡ ಪ್ರಶಸ್ತಿಗಳು ಲಭಿಸಿವೆ. ಅಗಲಿದ ನೀಲಕಂಠ ರಾವ್ ಅವರಿಗಾಗಿ ಕರ್ನಾಟಕ ರಾಜ್ಯ ಈಜು ಸಂಸ್ಥೆ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರು ಸಂತಾಪ ಸೂಚಿಸಿದ್ದಾರೆ.