ನೈಸರ್ಗಿಕ ದೇಹದಾರ್ಢ್ಯ ಸಾಧಕ ಕನ್ನಡಿಗ ಶೋಧನ್!
ಅಮೆರಿಕದಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್‌ನಲ್ಲಿ ಬಂಗಾರ
ಒಲಿಂಪಿಯಾ ಸ್ಪರ್ಧೆಯಲ್ಲಿ 7ನೇ ಸ್ಥಾನ
ಕಳೆದೆರಡು ದಶಕಗಳಿಂದ ನೈಸರ್ಗಿಕ ದೇಹದಾರ್ಢ್ಯ ಕ್ರೀಡೆಯಲ್ಲಿ ಸಕ್ರಿಯರಾಗಿರುವ ಶೋಧನ್ ರೈ
ಸ್ಪಂದನ್ ಕಣಿಯಾರ್, ಕನ್ನಡಪ್ರಭ
ಬೆಂಗಳೂರು(ಡಿ.27): ನೈಸರ್ಗಿಕ ದೇಹದಾರ್ಢ್ಯ ವಿಶ್ವಕಪ್‌ನಲ್ಲಿ ಕರ್ನಾಟಕದ ಶೋಧನ್ ರೈ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ನ್ಯಾಚುರಲ್ ಬಾಡಿ ಬಿಲ್ಡಿಂಗ್ ವಿಶ್ವಕಪ್‌ನ 35+ ವರ್ಷದವರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು. ಲಾಸ್ ವೇಗಾಸ್‌ನಲ್ಲಿ ನಡೆದ ನ್ಯಾಚುರಲ್ ಒಲಿಂಪಿಯಾ ಕೂಟದಲ್ಲಿ ಶೋಧನ್ 7ನೇ ಸ್ಥಾನ ಪಡೆದು ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
30-35 ರಾಷ್ಟ್ರಗಳ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದ ಈ ಕೂಟದಲ್ಲಿ ಭಾರತದಿಂದ ಕೇವಲ ಇಬ್ಬರು ಸ್ಪರ್ಧಿಗಳು ಪಾಲ್ಗೊಂಡಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಶೋಧನ್ 35+ ವರ್ಷದವರ ವಿಭಾಗದಲ್ಲಿ ಕಣಕ್ಕಿಳಿದಿದ್ದರು. ನ್ಯಾಚುರಲ್ ಬಾಡಿ ಬಿಲ್ಡಿಂಗ್‌ನಲ್ಲಿ ತಮ್ಮ ಪಯಣದ ಕುರಿತು ಶೋಧನ್, ‘ಕನ್ನಡಪ್ರಭ’ದೊಂದಿಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ತಂದೆಯೇ ಗುರು:
ಶೋಧನ್‌ರ ತಂದೆ ಕರ್ನಾಟಕದ ಖ್ಯಾತ ಬಾಡಿ ಬಿಲ್ಡರ್ ಜೆ.ಎನ್.ರೈ. ಅವರೇ ಶೋಧನ್‌ಗೆ ಸ್ಫೂರ್ತಿ ಹಾಗೂ ಮೊದಲ ಗುರು. 10ನೇ ವಯಸ್ಸಿನಲ್ಲೇ ಬಾಡಿ ಬಿಲ್ಡಿಂಗ್‌ನತ್ತ ಆಸಕ್ತ ತೋರಿದ ಶೋಧನ್ 16 ತುಂಬಿದಾಗ ವೃತ್ತಿಪರ ಬಾಡಿಬಿಲ್ಡರ್ ಆಗಲು ಅಭ್ಯಾಸ ಆರಂಭಿಸಿದರು. 17ನೇ ವರ್ಷದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿದ ಶೋಧನ್ ಆ ಬಳಿಕ 2001ರಲ್ಲಿ ಪ್ಯಾರಿಸ್‌ನಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡರು. ಆ ಬಳಿಕ ನಿರಂತರವಾಗಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಒಟ್ಟು 27 ಅಂತಾರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧಿಸಿ, ಅನೇಕ ಪದಕಗಳನ್ನು ಜಯಿಸಿದ್ದಾರೆ.
ತಪಸ್ಸಿದ್ದಂತೆ:
ಬಾಡಿ ಬಿಲ್ಡಿಂಗ್ ಅತ್ಯಂತ ಕಷ್ಟಕರ, ದುಬಾರಿ ಕ್ರೀಡೆಗಳಲ್ಲಿ ಒಂದು. ಬಹಳ ಶ್ರದ್ಧೆ, ಬದ್ಧತೆ, ಆಹಾರ ಸೇವನೆಯ ಬಗ್ಗೆ ಜಾಗರೂಕತೆ, ಅರಿವು ತುಂಬಾ ಮುಖ್ಯ. ದೇಹ ದಣಿಸುವುದರ ಜೊತೆಗೆ ಮಾನಸಿಕವಾಗಿಯೂ ಸದೃಢರಾಗಿರಬೇಕು. ಇವೆಲ್ಲಾ ಒಂದು ಕಡೆಯಾದರೆ, ಆರ್ಥಿಕವಾಗಿಯೂ ಬಲಿಷ್ಠರಾಗಿರುವುದು ಮುಖ್ಯ. ಶೋಧನ್ ಪ್ರಕಾರ ನೈಸರ್ಗಿಕ ಬಾಡಿಬಿಲ್ಡರ್ ಒಬ್ಬರಿಗೆ ಏನಿಲ್ಲವೆಂದರೂ ತಿಂಗಳಿಗೆ 40ರಿಂದ 50 ಸಾವಿರ ರು. ಖರ್ಚಾಗುತ್ತದೆ. ಪ್ರತಿ ನಿತ್ಯ 4 ರಿಂದ 5 ಬಾರಿ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಸೇವನೆ. ನಿತ್ಯ ವರ್ಕೌಟ್ ಮಾಡುವುದು ಕಡ್ಡಾಯ. ಇದೆಲ್ಲದರ ಜೊತೆಗೆ ತಾವು ಸೇವಿಸುವ ಪ್ರತಿಯೊಂದು ಪದಾರ್ಥವೂ ಅಂತಾರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ(ವಾಡಾ) ಪಟ್ಟಿ ಮಾಡಿರುವ ನಿಷೇಧಿತ ಪದಾರ್ಥ ಅಥವಾ ಮದ್ದುಗಳನ್ನು ಒಳಗೊಂಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ದೊಡ್ಡ ಸವಾಲು.
ಡೋಪಿಂಗ್‌ಗೆ ಕಠಿಣ ಶಿಕ್ಷೆ:
ಅಂತಾರಾಷ್ಟ್ರೀಯ ನ್ಯಾಚುರಲ್ ಬಾಡಿಬಿಲ್ಡಿಂಗ್ ಸಂಸ್ಥೆಯ ಪ್ರಧಾನ ಕಚೇರಿ ಅಮೆರಿದಲ್ಲಿದೆ. ಭಾರತದಲ್ಲೂ ಅದರ ಶಾಖೆ ಇದ್ದು, ವೃತ್ತಿಪರ ದೇಹದಾರ್ಢ್ಯ ಪಟುಗಳನ್ನು 3 ತಿಂಗಳಿಗೊಮ್ಮೆ ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮೂತ್ರ ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅದನ್ನು ಅಮೆರಿಕದ ಟೆಕ್ಸಾಸ್‌ನಲ್ಲಿರುವ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಯಾವುದೇ ಬಾಡಿಬಿಲ್ಡರ್ ನಿಷೇಧಿತ ಮದ್ದು ಅಥವಾ ಪದಾರ್ಥ ಸೇವಿಸಿರುವುದು ದೃಢಪಟ್ಟರೆ ಆತನ ಫೋಟೋ ಸಮೇತ ಸಂಪೂರ್ಣ ವಿವರಗಳನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿರುವ ‘ಹಾಲ್ ಆಫ್ ಶೇಮ್’ ವ್ಯಾಪ್ತಿಗೆ ಸೇರಿಸಲಾಗುತ್ತದೆ. ಅಂದರೆ ಡೋಪಿಂಗ್‌ನಲ್ಲಿ ಸಿಕ್ಕಿಬೀಳುವ ಬಾಡಿಬಿಲ್ಡರ್ ಆಜೀವ ನಿಷೇಧಕ್ಕೊಳಗಾಗಲಿದ್ದಾನೆ.
2 ವರ್ಷ ನಿಷೇಧಕ್ಕೊಳಗಾದ ಜಿಮ್ನಾಸ್ಟಿಕ್ಸ್ ತಾರೆ ದೀಪಾ ಕರ್ಮಕಾರ್!
ಏನಿದು ನ್ಯಾಚುರಲ್ ಬಾಡಿಬಿಲ್ಡಿಂಗ್?
ಬಾಡಿಬಿಲ್ಡರ್ ಎಂದರೆ ದಿನಕ್ಕೆ ಕೆ.ಜಿ.ಗಟ್ಟಲೇ ಆಹಾರ ಸೇವಿಸುತ್ತಾರೆ, ಇಷ್ಟು ಡಜನ್ ಮೊಟ್ಟೆ ತಿನ್ನುತ್ತಾರೆ.. ಹೀಗೆಲ್ಲಾ ಅಂದುಕೊಂಡಿರುತ್ತೀರ. ಇದು ಸುಳ್ಳಲ್ಲ. ಹಾಗಂತ ಸಂಪೂರ್ಣವಾಗಿ ನಿಜವೂ ಅಲ್ಲ. ನಿಯಮಿತ, ನೈಸರ್ಗಿಕ ಆಹಾರ ಸೇವನೆ, ಕೆಲವೇ ಗಂಟೆಗಳ ಅಭ್ಯಾಸದೊಂದಿಗೂ ಯಶಸ್ವಿ ಬಾಡಿ ಬಿಲ್ಡರ್ ಆಗಬಹುದು. ಇದಕ್ಕೆ ಉತ್ತಮ ಉದಾಹರಣೆ ಶೋಧನ್. ನೈಸರ್ಗಿಕ ಬಾಡಿಬಿಲ್ಡಿಂಗ್ ಎಂದರೆ ಯಾವುದೇ ಔಷಧೀಯ ಸಹಾಯ ಅಥವಾ ಸ್ಟೀರಾಯ್ಡ್‌ಗಳನ್ನು ಬಳಸದೆ ಕೇವಲ ಸಾಮಾನ್ಯ ಆಹಾರ ಪದ್ಧತಿಯೊಂದಿಗೆ ದೇಹ ಬೆಳೆಸುವುದು. ಸ್ಟಿರಾಯ್ಡ್‌ಗಳನ್ನು ತೆಗೆದುಕೊಳ್ಳುವ ಬಾಡಿಬಿಲ್ಡರ್ ಗರಿಷ್ಠ 6-7 ವರ್ಷ ದೊಡ್ಡ ಮಟ್ಟದ ಸ್ಪರ್ಧೆಗಳಲ್ಲಿ ಸ್ಪರ್ಧಿಸಬಹುದು. ಆದರೆ ನೈಸರ್ಗಿಕ ಬಾಡಿ ಬಿಲ್ಡಿಂಗ್‌ನಿಂದ ಹಲವು ವರ್ಷಗಳ ಕಾಲ ಕ್ರೀಡೆಯಲ್ಲಿ ಸಕ್ರಿಯರಾಗಿರಬಹುದು ಎನ್ನುವುದು ಶೋಧನ್‌ರ ಅನುಭವದ ಮಾತು.
ಪ್ರಾಯೋಜಕರ ಕೊರತೆ!
ಭಾರತದಲ್ಲಿ ಬೆರಳೆಣಿಕೆಯಷ್ಟು ನ್ಯಾಚುರಲ್ ಬಾಡಿಬಿಲ್ಡರ್‌ಗಳಿದ್ದು, ಆ ಪೈಕಿ ಶೋಧನ್ ಸಹ ಒಬ್ಬರು. 20 ವರ್ಷಗಳಿಗೂ ಹೆಚ್ಚು ಸಮಯದಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರೂ ಅವರಿಗೆ ಪ್ರಾಯೋಜಕರ ಕೊರತೆ ಈಗಲೂ ಇದೆ. ಪ್ರತಿ ವರ್ಷ ಜೂನ್‌ನಿಂದ ನವೆಂಬರ್ ವರೆಗೂ 5-6 ಪ್ರತಿಷ್ಠಿತ ಅಂತಾರಾಷ್ಟ್ರೀಯ ಕೂಟಗಳು ನಡೆಯಲಿವೆ. ಶೋಧನ್ ಈ ಪೈಕಿ ಕೇವಲ ಒಂದು ಇಲ್ಲವೇ ಎರಡನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರಣ, ಹಣಕಾಸಿನ ಕೊರತೆ. ಯಾವುದೇ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಬೇಕಿದ್ದರೂ ವಿಮಾನದ ಟಿಕೆಟ್‌ಗಳು, ಹೋಟೆಲ್ ರೂಂ ಬಾಡಿಗೆ, ಸ್ಪರ್ಧೆಗೆ ಕಟ್ಟಬೇಕಿರುವ ಶುಲ್ಕ, ಊಟ ಇತ್ಯಾದಿ ಸೇರಿ ಏನಿಲ್ಲವೆಂದರೂ 4ರಿಂದ 5 ಲಕ್ಷ ರು. ಖರ್ಚಾಗುತ್ತದಂತೆ. ಒಂದು ಚಾಂಪಿಯನ್‌ಶಿಪ್‌ಗೆ ಕನಿಷ್ಠ 6 ತಿಂಗಳ ಅಭ್ಯಾಸದ ಅವಶ್ಯಕತೆಯೂ ಇದೆ. ಕೆಲ ಪ್ರಾಯೋಜಕರು, ಸರ್ಕಾರದ ನೆರವು ದೊರೆತರೆ ಹೆಚ್ಚೆಚ್ಚು ಕೂಟಗಳಲ್ಲಿ ಸ್ಪರ್ಧಿಸಬಹುದು, ಇನ್ನಷ್ಟು ಆಸಕ್ತರಿಗೂ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಅನ್ನು ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ ಎನ್ನುವುದು ಶೋಧನ್‌ರ ಅಭಿಪ್ರಾಯ.
ಅಗ್ರ ಬ್ಯುಸಿನೆಸ್‌ಮನ್, ನಟ, ನಟಿಯರಿಗೆ ಫಿಟ್ನೆಸ್ ತರಬೇತಿ!
ಶೋಧನ್ ಒಬ್ಬ ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರು. ಪ್ರಖ್ಯಾತ ಕಂಪನಿಗಳ ಬಾಸ್‌ಗಳು, ರಾಜಕೀಯ ನಾಯಕರು, ಬಹುಭಾಷಾ ಚಲನಚಿತ್ರ ನಟ, ನಟಿಯರಿಗೆ ಶೋಧನ್ ಫಿಟ್ನೆಸ್ ತರಬೇತಿ ನೀಡುತ್ತಾರೆ. ಇದೇ ಅವರ ಉದ್ಯೋಗ. ಸಂಪಾದನೆಯಿಂದ ಬಂದ ಹಣವನ್ನು ಅಂ.ರಾ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಬಳಸುತ್ತೇನೆ ಎನ್ನುತ್ತಾರೆ ಶೋಧನ್.
ಶೋಧನ್ ರೈ ಸಾಧನೆ
* 2017, 2022ರ ನ್ಯಾಚುರಲ್ ವಿಶ್ವಕಪ್‌ನಲ್ಲಿ ಚಿನ್ನ
* 2017ರ ನ್ಯಾಚುರಲ್ ಒಲಿಂಪಿಯಾದಲ್ಲಿ ಬೆಳ್ಳಿ, 2022ರಲ್ಲಿ 7ನೇ ಸ್ಥಾನ
* 2019ರ ನ್ಯಾಚುರಲ್ ಯೂನಿವರ್ಸ್ ಸ್ಪರ್ಧೆಯಲ್ಲಿ ಬೆಳ್ಳಿ
* 2019 ವಿಶ್ವಕಪ್‌ನಲ್ಲಿ 2 ಚಿನ್ನ, 1 ಬೆಳ್ಳಿ, ಬೆಸ್ಟ್ ಪೋಸರ್ ಪ್ರಶಸ್ತಿ
* 2012ರ ಏಷ್ಯಾ-ಪೆಸಿಫಿಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
* 2001ರ ಮಿಸ್ಟರ್ ಯೂನಿವರ್ಸ್(ಅಂಡರ್-21)ನಲ್ಲಿ ಕಂಚು
* 2013ರಲ್ಲಿ ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ