ಭಾರತದ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಕಾರ್‌ 2 ವರ್ಷ ನಿಷೇಧ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಫೆಡರೇಶನ್‌ನಿಂದ ಕಠಿಣ ನಿರ್ಧಾರದೀಪಾ ಡೋಪಿಂಗ್‌ ಪರೀಕ್ಷೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ತೀರ್ಮಾನ

ನವದೆಹಲಿ(ಡಿ.27): 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಿ ಎಲ್ಲರ ಗಮನ ಸೆಳೆದಿದ್ದ ಭಾರತದ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಕಾರ್‌ 2 ವರ್ಷ ನಿಷೇಧ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಫೆಡರೇಶನ್‌(ಎಫ್‌ಐಜಿ) ನೀಡಿದ ಮಾಹಿತಿ ಪ್ರಕಾರ ದೀಪಾ ಡೋಪಿಂಗ್‌ ಪರೀಕ್ಷೆಗೆ ಹಾಜರಾಗದ ಹಿನ್ನೆಲೆಯಲ್ಲಿ 2021ರ ಮಧ್ಯ ಭಾಗದಲ್ಲೇ ನಿಷೇಧಕ್ಕೊಳಗಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 

ವಿಶ್ವ ಡೋಪಿಂಗ್‌ ನಿಗ್ರಹ ಘಟಕ(ವಾಡಾ)ದ ನಿಯಮದ ಪ್ರಕಾರ, ಯಾವುದೇ ಅಥ್ಲೀಟ್‌ ಪ್ರತಿ 3 ತಿಂಗಳಿಗೊಮ್ಮೆ ತಮ್ಮ ಸ್ಪರ್ಧೆಯ ವೇಳಾಪಟ್ಟಿಬಗ್ಗೆ ಮಾಹಿತಿ ನೀಡಬೇಕು ಮತ್ತು ಡೋಪಿಂಗ್‌ ಪರೀಕ್ಷೆಗೆ ಹಾಜರಾಗಬೇಕು. ಆದರೆ ದೀಪಾ 3 ಬಾರಿ ಪರೀಕ್ಷೆ ತಪ್ಪಿಸಿಕೊಂಡಿದ್ದರಿಂದ ಅವರಿಗೆ ನಿಷೇಧ ಹೇರಲಾಗಿದೆ ಎಂದು ಗೊತ್ತಾಗಿದೆ.

Scroll to load tweet…

ಸಂತೋಷ್‌ ಟ್ರೋಫಿ: ರಾಜ್ಯಕ್ಕೆ ಲಡಾಖ್‌ ಸವಾಲು

ನವದೆಹಲಿ: ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ ಮಂಗಳವಾರ ಲಡಾಖ್‌ ವಿರುದ್ಧ ಸೆಣಸಾಡಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್‌ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಭರ್ಜರಿಯಾಗಿ ಗೆದ್ದಿದ್ದ ರಾಜ್ಯ ತಂಡ ಭಾನುವಾರ ಉತ್ತರಾಖಂಡ ವಿರುದ್ಧ 3-1ರಿಂದ ಜಯಗಳಿಸಿತ್ತು.

Chitradurga : ಕುರಿ ಕಾಯುವ ಹುಡುಗಿಯಿಂದ ಮಲೇಷ್ಯಾದಲ್ಲಿ ಚಿನ್ನದ ಬೇಟೆ: ಸಾಧನೆಗೆ ಪಟ್ಟಪಾಡು ಅಷ್ಟಿಷ್ಟಲ್ಲ

ಸದ್ಯ ಗುಂಪು 1ರಲ್ಲಿ 6 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಕರ್ನಾಟಕ ನಂ.1 ಸ್ಥಾನದಲ್ಲೇ ಮುಂದುವರಿಯುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಡೆಲ್ಲಿ ವಿರುದ್ಧ 0-7 ಗೋಲುಗಳಿಂದ ಹೀನಾಯವಾಗಿ ಸೋತು, ಉತ್ತರಾಖಂಡ ವಿರುದ್ಧ 2-2ರಲ್ಲಿ ಡ್ರಾ ಮಾಡಿಕೊಂಡಿದ್ದ ಲಡಾಖ್‌ ಮೊದಲ ಗೆಲುವಿನ ಕಾತರದಲ್ಲಿದೆ.

ಪಂದ್ಯ: ಬೆಳಗ್ಗೆ 11ಕ್ಕೆ

ಹಾಕಿ ವಿಶ್ವಕಪ್‌: ರೂರ್ಕೆಲಾ ಪಂದ್ಯಗಳ ಟಿಕೆಟ್‌ ಸೋಲ್ಡೌಟ್‌!

ರೂರ್ಕೆಲಾ: 2023ರ ಎಫ್‌ಐಎಚ್‌ ಹಾಕಿ ವಿಶ್ವಕಪ್‌ ಒಡಿಶಾದಲ್ಲಿ ಜ.13ರಿಂದ 29ರ ವರೆಗೆ ನಡೆಯಲಿದ್ದು, ರೂರ್ಕೆಲಾದಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಕೆಲವೇ ದಿನಗಳಲ್ಲಿ ಮಾರಾಟವಾಗಿದೆ ಎಂದು ಹಾಕಿ ಇಂಡಿಯಾ ಮಾಹಿತಿ ನೀಡಿದೆ. ರೂರ್ಕೆಲಾದಲ್ಲಿ ನೂತನವಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಕ್ರೀಡಾಂಗಣ 20,000 ಆಸನ ಸಾಮರ್ಥ್ಯ ಹೊಂದಿದ್ದು, ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನಿಸಿಕೊಂಡಿದೆ.

ಟೂರ್ನಿಯ 20 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಡಿ.19ಕ್ಕೆ ಇಲ್ಲಿನ ಪಂದ್ಯಗಳ ಟಿಕೆಟ್‌ ಮಾರಾಟಕ್ಕಿಟ್ಟಿದ್ದು, ವಾರದೊಳಗೆ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದೆ. ಇನ್ನು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದ 24 ಪಂದ್ಯಗಳ ಬಹುತೇಕ ಟಿಕೆಟ್‌ಗಳು ಕೂಡಾ ಮಾರಾಟವಾಗಿವೆ ಎಂದು ತಿಳಿದುಬಂದಿದೆ.

ಪ್ರತಿಭಾನ್ವೇಷೆಗಾಗಿ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆಯಿಂದ ಗ್ರಾಮೀಣ ಚಾಂಪಿಯನ್‌ಶಿಪ್‌!

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಪ್ರತಿಭಾನ್ವೇಷಣೆಗಾಗಿ ಪುರುಷರ ಗ್ರಾಮೀಣ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ ಅನ್ನು ರಾಜ್ಯದ ಹಲವೆಡೆ ಆಯೋಜಿಸಿದೆ. ಚಾಂಪಿಯನ್‌ಶಿಪ್‌ನ 2ನೇ ಹಂತದ ಪಂದ್ಯಗಳು ಡಿ.30, 31 ಹಾಗೂ ಜ.1ರಂದು ಮೈಸೂರಿನಲ್ಲಿ ನಡೆಯಲಿವೆ. ಈಗಾಗಲೇ ಡಿಸೆಂಬರ್ 24, 25ಕ್ಕೆ ಕೋಲಾರ ವಲಯದ ಪಂದ್ಯಗಳು ನಡೆದಿದ್ದು, ಮಂಗಳೂರು ವಲಯದ ಪಂದ್ಯಗಳು ಜನವರಿ 7, 8ಕ್ಕೆ ಮಂಗಳೂರಿನಲ್ಲಿ, ಗುಲ್ಬರ್ಗಾ ವಲಯದ ಪಂದ್ಯಗಳು ಜನವರಿ14, 15ಕ್ಕೆ ಗುಲ್ಬರ್ಗಾದಲ್ಲಿ ಆಯೋಜನೆಗೊಳ್ಳಲಿದೆ. ಧಾರವಾಡ, ದಾವಣಗೆರೆ ವಲಯದ ವೇಳಾಪಟ್ಟಿಇನ್ನಷ್ಟೇ ಪ್ರಕಟಗೊಳ್ಳಲಿದೆ. ಎಲ್ಲಾ ವಲಯದ ಚಾಂಪಿಯನ್‌ ಹಾಗೂ ರನ್ನರ್‌-ಅಪ್‌ ತಂಡಗಳು ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಫೈನಲ್‌ ಲೀಗ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.

ರಾಜ್ಯ ಕ್ರಾಸ್‌ ಕಂಟ್ರಿ ಓಟ: ನವೀನ್‌, ಅರ್ಚನಾಗೆ ಚಿನ್ನ

ಬೆಂಗಳೂರು: ತುಮಕೂರಿನ ಕೊರಟಗೆರೆಯಲ್ಲಿ ಶನಿವಾರ ನಡೆದ ರಾಜ್ಯ ಕ್ರಾಸ್‌ ಕಂಟ್ರಿ ಓಟದಲ್ಲಿ ಮೈಸೂರಿನ ನವೀನ್‌ ಪಾಟೀಲ… ಹಾಗೂ ಕೆ.ಎಂ.ಅರ್ಚನಾ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. 

ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಹಾಗೂ ತುಮಕೂರು ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆ ಆಶ್ರಯಲ್ಲಿ ನಡೆದ ಸ್ಪರ್ಧೆಯ 10 ಕಿ.ಮೀ ಓಟವನ್ನು ನವೀನ್‌ 36.02 ನಿಮಿಷಗಳಲ್ಲಿ ಪೂರ್ಣಗೊಳಿಸಿದರೆ ಅರ್ಚನಾ 42.55 ನಿಮಿಷಗಳಲ್ಲಿ ಗುರಿ ತಲುಪಿದರು. 20 ವರ್ಷದೊಳಗಿನ ಬಾಲಕ, ಬಾಲಕಿಯರ ಸ್ಪರ್ಧೆಯಲ್ಲಿ ಕ್ರಮವಾಗಿ ಡಿವೈಇಎಸ್‌ನ ಶಿವಾಜಿ ಪರಶುರಾಮ್‌, ಬೆಂಗಳೂರು ನಗರದ ಪ್ರಿಯಾಂಕ ಅಗ್ರಸ್ಥಾನ ಪಡೆದರು. ಪುರುಷರ ತಂಡ ವಿಭಾಗದಲ್ಲಿ ಮೈಸೂರು, ಮಹಿಳೆಯರ ತಂಡ ವಿಭಾಗದಲ್ಲಿ ಬೆಂಗಳೂರು ನಗರ ಚಾಂಪಿಯನ್‌ ಆಯಿತು.