ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಈ ದಿನವು ಭಾರತೀಯ ಕ್ರೀಡೆಗೆ ಅವರ ಕೊಡುಗೆಯನ್ನು ಸ್ಮರಿಸುತ್ತದೆ ಮತ್ತು ಕ್ರೀಡಾಪಟುಗಳನ್ನು ಗೌರವಿಸುತ್ತದೆ.
ಬೆಂಗಳೂರು: ಇಂದು ಅಂದರೆ ಆಗಸ್ಟ್ 29ರಂದು ದೇಶದಾದ್ಯಂತ ಅತ್ಯಂತ ಸಡಗರದಿಂದ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಇತ್ತೀಚಿಗಿನ ವರ್ಷಗಳಲ್ಲಿ ನಮ್ಮ ದೇಶದ ಯುವ ಜನತೆ ಅತ್ಯಂತ ಆಸಕ್ತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸಿ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಹೆಜ್ಜೆಗುರುತುಗಳನ್ನು ದಾಖಲಿಸಿ ಮುನ್ನಡೆಯುತ್ತಿದ್ದಾರೆ. ಕ್ರಿಕೆಟ್‌ನಿಂದ ಹಿಡಿದು ಹಾಕಿ, ಟೆನಿಸ್, ಬ್ಯಾಡ್ಮಿಂಟನ್, ಕುಸ್ತಿ, ಕಬಡ್ಡಿ ಹಾಗೂ ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಭಾರತೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಪತಾಕೆಯನ್ನು ಹಾರಿಸುತ್ತಿದ್ದಾರೆ. ಬನ್ನಿ ನಾವಿಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಗಸ್ಟ್ 29ರಂದು ಯಾಕೆ ಆಚರಿಸಲಾಗುತ್ತದೆ? ಯಾವಾಗಿನಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲು ಆರಂಭಿಸಲಾಯಿತು ಎನ್ನುವುದನ್ನು ನೋಡೋಣ.
ಏಕೆ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ?
ಅಂದಹಾಗೆ, ಭಾರತದಲ್ಲಿ ಆಗಸ್ಟ್ 29ರಂದು ಹಾಕಿ ದಿಗ್ಗಜ ಮೇಕರ್ ಧ್ಯಾನ್‌ಚಂದ್ ಹುಟ್ಟುಹಬ್ಬದ ಸ್ಮರಣಾರ್ಥ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಕಿ ಮಾಂತ್ರಿಕ ಎಂದೇ ಹೆಸರುವಾಸಿಯಾಗಿದ್ದ ಧ್ಯಾನ್‌ಚಂದ್ ಅವರ ಗೋಲು ಗಳಿಸುವ ಕೌಶಲ್ಯಕ್ಕೆ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದರು. ಧ್ಯಾನ್‌ಚಂದ್ ಅವರಿಂದಾಗಿ ಜಾಗತಿಕ ಮಟ್ಟದಲ್ಲಿ ಹಾಕಿಗೆ ಹಾಗೂ ಭಾರತಕ್ಕೆ ತನ್ನದೇ ಆದ ಬೆಂಚ್‌ಮಾರ್ಕ್ ಸೆಟ್ ಮಾಡಿದ್ದರು. ಮೇಜರ್ ಧ್ಯಾನ್‌ಚಂದ್ ಅವರು ಆಗಸ್ಟ್ 29, 1905ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ಜನಿಸಿದರು. ಧ್ಯಾನ್‌ಚಂದ್ ಭಾರತ ಪರ 185 ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳನ್ನಾಡಿ 570 ಗೋಲು ಬಾರಿಸಿದ್ದಾರೆ.
ಓಲಿಂಪಿಕ್ಸ್‌ನಲ್ಲಿ ಹಾಕಿ ಸಾಮ್ರಾಟನಾಗಿ ಮೆರೆದ ಭಾರತ:
ಮೇಜರ್ ಧ್ಯಾನ್‌ಚಂದ್ ಓಲಿಂಪಿಕ್ಸ್‌ನಲ್ಲೂ ಸ್ವತಂತ್ರಪೂರ್ವ ಭಾರತ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದರು. ಧ್ಯಾನ್‌ಚಂದ್ 1928ರಿಂದ 1936ರ ಓಲಿಪಿಂಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಸತತ ಮೂರು ಒಲಿಂಪಿಕ್ಸ್‌ನಲ್ಲೂ ಭಾರತ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಇದಾದ ಬಳಿಕವೂ ಭಾರತ ಒಲಿಂಪಿಕ್ಸ್‌ನ ಹಾಕಿ ಕ್ರೀಡಾ ಕೂಟದಲ್ಲಿ 1948, 1952 ಹಾಗೂ 1956ರಲ್ಲೂ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿತ್ತು.
ಯಾವಾಗಿನಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆರಂಭಿಸಲಾಯಿತು?:
2012ರಲ್ಲಿ ಮೇಜರ್ ಧ್ಯಾನ್‌ಚಂದ್ ಜಯಂತಿಯ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಘೋಷಣೆ ಮಾಡಲಾಯಿತು. ಇದಾದ ಬಳಿಕ ಪ್ರತಿವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಾ ಬರಲಾಗುತ್ತಿದೆ. ಇನ್ನು 2019ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ಫಿಟ್ ಇಂಡಿಯಾ ಅಭಿಯಾನ ಶುರು ಮಾಡಲಾಯಿತು.
