38ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕವು ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಘು ತಲಾ ಒಂಬತ್ತು ಚಿನ್ನದ ಪದಕಗಳನ್ನು ಗೆದ್ದಿದ್ದು, ಕೂಟದ ಶ್ರೇಷ್ಠ ಕ್ರೀಡಾಪಟುಗಳೆಂದು ಗುರುತಿಸಲ್ಪಟ್ಟಿದ್ದಾರೆ. ಕರ್ನಾಟಕ ಒಟ್ಟು 37 ಪದಕಗಳನ್ನು ಗೆದ್ದಿದೆ. ಬ್ಯಾಡ್ಮಿಂಟನ್‌ನಲ್ಲೂ ರಾಜ್ಯಕ್ಕೆ ಮೂರು ಚಿನ್ನ ಸೇರಿದಂತೆ ಆರು ಪದಕಗಳು ಲಭಿಸಿವೆ. ಕಯಾಕಿಂಗ್ ಮತ್ತು ಯೋಗಾಸನದಲ್ಲೂ ಪದಕ ಗೆದ್ದಿದೆ.
ಡೆಹ್ರಾಡೂನ್ /ಹಲ್ದ್ವಾನಿ: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಪ್ರಾಬಲ್ಯ ಮುಂದುವರಿಸಿದೆ. ಮಂಗಳವಾರ ಮುಕ್ತಾಯ ಗೊಂಡ ಈಜು ಸ್ಪರ್ಧೆಗಳಲ್ಲಿ ಕರ್ನಾಟಕ ಪುರುಷ, ಮಹಿಳಾಎರಡೂ ವಿಭಾಗಗಳಲ್ಲಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಶ್ರೀಹರಿ ನಟರಾಜ್ ಹಾಗೂ ಧಿನಿಧಿ ದೇಸಿಂಘು, ತಲಾ 9 ಚಿನ್ನದ ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದರು.
ಕೊನೆಯ ದಿನವಾದ ಮಂಗಳಾರ 14 ವರ್ಷದ ಧಿನಿಧಿ, ಮಹಿಳೆಯರ 100 ಮೀ. ಫ್ರೀ ಸ್ಟೈಲ್ ಸ್ಪರ್ಧೆಯನ್ನು 57.34 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ರಾಷ್ಟ್ರೀಯ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 2023ರಲ್ಲಿ ಗೋವಾದಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಾವೇ ನಿರ್ಮಿಸಿದ್ದ ದಾಖಲೆ (57.87 ಸೆಕೆಂಡ್) ಯನ್ನು ಉತ್ತಮಗೊಳಿಸಿ ಕೊಂಡರು. ಇನ್ನು, ಪುರುಷರ 100 ಮೀ. ಫ್ರೀ ಸ್ಟೈಲ್‌ನಲ್ಲಿ 50.65 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಶ್ರೀಹರಿ ನಟರಾಜ್ ಚಿನ್ನ ಜಯಿಸಿದರು. ಬಳಿಕ, ಶ್ರೀಹರಿ ಹಾಗೂ ಧಿನಿಧಿ ಸೇರಿಕೊಂಡು 4X100 ಮೀ. ಮೆಡ್ಲೆರಿಲೇಯಲ್ಲಿ ಚಿನ್ನ ಜಯಿಸಿದರು. 4 ನಿಮಿಷ 3.91 ಸೆಕೆಂಡ್ ಗಳಲ್ಲಿ ಗುರಿ ತಲುಪಿದ ತಂಡದಲ್ಲಿ ವಿಧಿತ್ ಶಂಕರ್ ಹಾಗೂ ನೈಶಾ ಶೆಟ್ಟಿ ಸಹ ಇದ್ದರು.
ರಾಷ್ಟ್ರೀಯ ಗೇಮ್ಸ್: ಕರ್ನಾಟಕದ ಶ್ರೀಹರಿ, ಧಿನಿಧಿಗೆ 7ನೇ ಚಿನ್ನ!
ಈಜಿನಲ್ಲಿ ರಾಜ್ಯಕ್ಕೆ ದಿನದ ಮೊದಲ ಚಿನ್ನವನ್ನು ವಿಧಿತ್ ಶಂಕರ್ ಗೆದ್ದುಕೊಟ್ಟರು. ಪುರುಷರ 100 ಮೀ. ಬ್ರೆಸ್ಟ್‌ಸ್ಟೋಕ್ ವಿಭಾಗದಲ್ಲಿ ವಿಧಿತ್, 1 ನಿಮಿಷ 3.97 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ಈಜಿನಲ್ಲಿ ಕರ್ನಾಟಕ 22 ಚಿನ್ನ, 10 ಬೆಳ್ಳಿ, 5 ಕಂಚಿನೊಂದಿಗೆ ಒಟ್ಟು 37 37 ಪದಕ ಜಯಿಸಿ ಚಾಂಪಿಯನ್ ಆಯಿತು. 5 ಚಿನ್ನ, 11 ಬೆಳ್ಳಿ ಹಾಗೂ 12 ಕಂಚು ಪಡೆದ ಮಹಾರಾಷ್ಟ್ರ 2ನೇ ಸ್ಥಾನಿಯಾಯಿತು.
ಶ್ರೀಹರಿ, ಧಿನಿಧಿ ಕೂಟದ ಶ್ರೇಷ್ಠ ಕ್ರೀಡಾಪಟುಗಳು!
ಶ್ರೀಹರಿ ನಟರಾಜ್ ಹಾಗೂ ಧಿನಿಧಿ ದೇಸಿಂಘು ಕೂಟದ ಶ್ರೇಷ್ಠ ಕ್ರೀಡಾಪಟುಗಳು ಪ್ರಶಸ್ತಿ ಜಯಿಸಿದರು. ಶ್ರೀಹರಿ ಒಟ್ಟು 10 ಪದಕ ಗೆದ್ದರೆ, ಧಿನಿಧಿ ಒಟ್ಟು 11 ಪದಕಗಳಿಗೆ ಕೊರಳೊಡ್ಡಿದರು. 2023ರಲ್ಲೂ ಶ್ರೀಹರಿ ಶ್ರೇಷ್ಠ ಕ್ರೀಡಾಪಟು ಗೌರವ ಪಡೆದಿದ್ದರು. ಆ ವರ್ಷ 8 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದಿದ್ದರು.
ಬೆಂಗಳೂರು ಬುಲ್ಸ್ ಸೇರಲು ಇಲ್ಲಿದೆ ಒಳ್ಳೆಯ ಚಾನ್ಸ್! ಈ 2 ದಿನ ನಡೆಯುತ್ತೆ ಸೆಲೆಕ್ಷನ್ ಟ್ರಯಲ್ಸ್
ಕಯಾಕಿಂಗ್, ಯೋಗಾಸನ ಸ್ಪರ್ಧೆಗಳಲ್ಲೂ ರಾಜ್ಯಕ್ಕೆ ಪದಕ
ಪುರುಷರ ಕೆನೋಯಿಂಗ್ ಹಾಗೂ ಕಯಾಕಿಂಗ್‌ನ ಸ್ಥಾಲೊಮ್ ಕೆ ವಿಭಾಗದಲ್ಲಿ ನಾಗೇಶ್ ನಾಯ್ಕ ಬೆಳ್ಳಿ ಜಯಿಸಿದರೆ, ಪುರುಷರ ಸಾಂಪ್ರದಾಯಿಕ ಯೋಗಾಸನದಲ್ಲಿ ಭರತ್ ರಾಮ ಗೌಡ ಕಂಚಿನ ಪದಕ ಪಡೆದರು. ಬುಧವಾರ ರಾಜ್ಯಕ್ಕೆ ಮತ್ತಷ್ಟು ಪದಕಗಳು ದೊರೆಯುವ ನಿರೀಕ್ಷೆ ಇದೆ. ಕ್ರೀಡಾಕೂಟವು ಫೆ.14ರ ವರೆಗೂ ನಡೆಯಲಿದೆ.
ಬ್ಯಾಡ್ಮಿಂಟನ್: ರಾಜ್ಯಕ್ಕೆ 3 ಚಿನ್ನ!
ರಾಷ್ಟ್ರೀಯ ಗೇಮ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲೂ ರಾಜ್ಯ ಭರ್ಜರಿ ಸಾಧನೆ ಮಾಡಿದೆ. ಪುರುಷರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಕರ್ನಾಟಕ, ಇದೀಗ ಪುರುಷ, ಮಹಿಳಾ ಡಬಲ್ಸ್‌ನಲ್ಲ ಚಿನ್ನ ಬಾಚಿಕೊಂಡಿದೆ. ಒಟ್ಟಾರೆ ಬ್ಯಾಡ್ಮಿಂಟನ್ ನಲ್ಲಿ ರಾಜ್ಯಕ್ಕೆ 6 ಪದಕ ಸಿಕ್ಕಿದೆ. ಕರ್ನಾಟಕದ 2 ಜೋಡಿಗಳ ನಡುವೆ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ನಿತಿನ್ ಎಚ್ ಹಾಗೂ ಪ್ರಕಾಶ್ ರಾಜ್ 21-16, 21-14ರಲ್ಲಿ ವೈಭವ್ ಹಾಗೂ ಆಶಿತ್ ಸೂರ್ಯರನ್ನು ಸೋಲಿಸಿದರು.
ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ರಾಜ್ಯದ ಶಿಖಾ ಗೌತಮ್ ಹಾಗೂ ಅಶ್ವಿನಿ ಭಟ್ ಜೋಡಿಯು ಉತ್ತರಾಖಂಡದ ಏಂಜೆಲ್ ಪುನೇರಾ, ಆನ್ಯಾ ಬಿಶ್ ವಿರುದ್ಧ 21-11, 21-13 ಗೇಮ್‌ಗಳಲ್ಲಿ ಜಯಿಸಿತು. ಮಿಶ್ರ ಡಬಲ್ಸ್‌ನಲ್ಲಿ ಆಶಿತ್ ಸೂರ್ಯ-ಅಮೃತಾ ಪ್ರಮುತೇಶ್, ಪುರುಷರ ಸಿಂಗಲ್ಸ್‌ನಲ್ಲಿ ಸನೀತ್ ದಯಾನಂದ್ ಕಂಚು ಪಡೆದರು.
