ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ೧೨ನೇ ಆವೃತ್ತಿಗೆ ಕೋಚ್‌ ಆಗಿ ಬಿ.ಸಿ. ರಮೇಶ್‌ ಅವರನ್ನು ನೇಮಿಸಿದೆ. ಫೆಬ್ರವರಿ ೮ ಮತ್ತು ೯ ರಂದು ಕಂಠೀರವ ಕ್ರೀಡಾಂಗಣದಲ್ಲಿ ಆಟಗಾರರ ಆಯ್ಕೆ ನಡೆಯಲಿದೆ. ೧೭ ರಿಂದ ೨೭ ವರ್ಷದೊಳಗಿನ, ಎಕೆಎಫ್‌ಐ ನೋಂದಾಯಿತ ಆಟಗಾರರು ಮಧ್ಯಾಹ್ನ ೨ ಗಂಟೆಗೆ ಹಾಜರಿರಬೇಕು.

ಬೆಂಗಳೂರು: ಪ್ರೊ ಕಬಡ್ಡಿ 12ನೇ ಆವೃತ್ತಿಗೆ ಕರ್ನಾಟಕದ ಬಿ.ಸಿ.ರಮೇಶ್‌ರನ್ನು ಪ್ರಧಾನ ಕೋಚ್‌ ಆಗಿ ನೇಮಿಸಿಕೊಂಡಿರುವ ಬೆಂಗಳೂರು ಬುಲ್ಸ್‌, ಇದೀಗ ರಾಜ್ಯದಲ್ಲಿ ಕಬಡ್ಡಿ ಪ್ರತಿಭೆಗಳ ಹುಡುಕಾಟ ನಡೆಸಲು ನಿರ್ಧರಿಸಿದೆ. 

ಫೆಬ್ರವರಿ 8 ಹಾಗೂ 9ರಂದು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್‌ ನಡೆಸುವುದಾಗಿ ಘೋಷಿಸಿರುವ ಬುಲ್ಸ್‌, ಕೆಲ ಷರತ್ತುಗಳನ್ನು ವಿಧಿಸಿದೆ. ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಆಟಗಾರರು, 17ರಿಂದ 27 ವರ್ಷ ವಯಸ್ಸಿನೊಳಗಿನವರಾಗಿರಬೇಕು. ಅಖಿಲ ಭಾರತೀಯ ಕಬಡ್ಡಿ ಫೆಡರೇಶನ್(ಎಕೆಎಫ್‌ಐ)ನಲ್ಲಿ ಹೆಸರು ನೋಂದಾಯಿಸಿಕೊಂಡಿರಬೇಕು ಅಥವಾ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಿರಬೇಕು ಎಂದು ತಿಳಿಸಿದೆ. ಆಸಕ್ತರು ಮೇಲ್ಕಂಡ ದಿನಾಂಕದಂದು ಮಧ್ಯಾಹ್ನ 2 ಗಂಟೆಗೆ ಸ್ಥಳದಲ್ಲಿ ಹಾಜರಿರುವಂತೆ ಬುಲ್ಸ್‌ ತಂಡ ಟ್ವೀಟ್‌ ಮಾಡಿ ಸೂಚಿಸಿದೆ.

Scroll to load tweet…
Scroll to load tweet…

ಬೆಂಗಳೂರು ಬುಲ್ಸ್‌ಗೆ ಕನ್ನಡಿಗ ರಮೇಶ್‌ ಕೋಚ್‌

ಬೆಂಗಳೂರು: ಪ್ರೊ ಕಬಡ್ಡಿಯ ಬೆಂಗಳೂರು ಬುಲ್ಸ್‌ ತಂಡದ ನೂತನ ಪ್ರಧಾನ ಕೋಚ್‌ ಆಗಿ ಕನ್ನಡಿಗ, ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ್‌ ನೇಮಕಗೊಂಡಿದ್ದಾರೆ. ಉದ್ಘಾಟನಾ ಆವೃತ್ತಿಯಿಂದ ಕಳೆದ ವರ್ಷದ ವರೆಗೂ ಒಟ್ಟು 11 ಆವೃತ್ತಿಗಳಲ್ಲಿ ತಂಡದ ಪ್ರಧಾನ ಕೋಚ್‌ ಆಗಿದ್ದ ರಣ್‌ಧೀರ್‌ ಸಿಂಗ್‌ರನ್ನು ಹುದ್ದೆಯಿಂದ ಕೈಬಿಟ್ಟಿದ್ದಾಗಿ ಬುಲ್ಸ್‌ ತಂಡದ ಆಡಳಿತ ತಿಳಿಸಿದೆ.

ಕಳೆದ ಹಲವು ಆವೃತ್ತಿಗಳಿಂದ ರಾಜ್ಯದ ಕಬಡ್ಡಿ ಅಭಿಮಾನಿಗಳು ರಮೇಶ್‌ರನ್ನು ಕೋಚ್‌ ಆಗಿ ನೇಮಿಸಿಕೊಳ್ಳುವಂತೆ ಬುಲ್ಸ್‌ಗೆ ಸಾಮಾಜಿಕ ತಾಣಗಳಲ್ಲಿ ಒತ್ತಾಯಿಸುತ್ತಿದ್ದರು. ಅಭಿಮಾನಿಗಳ ಒತ್ತಡಕ್ಕೆ ಮಣಿದು ರಮೇಶ್‌ ಅವರಿಗೆ ಪ್ರಧಾನ ಕೋಚ್‌ ಹುದ್ದೆ ನೀಡಲಾಗಿದೆ ಎಂದು ಬುಲ್ಸ್‌ನ ಸಿಇಒ ಕೀರ್ತಿ ಮುರಳೀಕೃಷ್ಣನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2018ರಲ್ಲಿ ರಮೇಶ್‌ ತಂಡದ ಕೋಚ್‌ ಆಗಿದ್ದಾಗ ಬುಲ್ಸ್‌ ಮೊದಲ ಬಾರಿಗೆ ಚಾಂಪಿಯನ್‌ ಆಗಿತ್ತು. ಆದರೆ ಮುಂದಿನ ಆವೃತ್ತಿಗೆ ಅವರನ್ನು ತಂಡದಲ್ಲಿ ಮುಂದುವರಿಸಿರಲಿಲ್ಲ. 2019ರಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದ ರಮೇಶ್‌ ಆ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಬಳಿಕ 2023ರಲ್ಲಿ ರಮೇಶ್‌ ಅವರ ಮಾರ್ಗದರ್ಶನದಲ್ಲಿ ಪುಣೇರಿ ಪಲ್ಟನ್‌ ಪ್ರಶಸ್ತಿ ಜಯಿಸಿತ್ತು.