Asianet Suvarna News Asianet Suvarna News

National Games 2022: ಇಂದಿನಿಂದ ರಾಷ್ಟ್ರೀಯ ಗೇಮ್ಸ್ ಆರಂಭ; ಗುಜರಾತ್ ಆತಿಥ್ಯ

ಇಂದಿನಿಂದ 36ನೇ ರಾಷ್ಟ್ರೀಯ ಗೇಮ್ಸ್‌ ಗುಜರಾತ್‌ನಲ್ಲಿ ಆರಂಭ
7 ವರ್ಷಗಳ ಬಳಿಕ ಕ್ರೀಡಾಕೂಟಕ್ಕೆ ಚಾಲನೆ
ದೇಶದ ಸುಮಾರು 7000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿರುವ ಕ್ರೀಡಾಕೂಟ

National Games 2022 Sports fans All you need to know kvn
Author
First Published Sep 29, 2022, 9:39 AM IST

ಅಹಮದಾಬಾದ್‌(ಸೆ.29): 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಗುರುವಾರ ಅಧಿಕೃತ ಚಾಲನೆ ದೊರೆಯಲಿದೆ. 7 ವರ್ಷಗಳ ಬಳಿಕ ಕ್ರೀಡಾಕೂಟ ನಡೆಯುತ್ತಿದ್ದು, ಈಗಾಗಲೇ ಕೆಲ ಸ್ಪರ್ಧೆಗಳು ಆರಂಭಗೊಂಡಿವೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಗುರುವಾರ ಸಂಜೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಕ್ಟೋಬರ್ 12ರ ವರೆಗೂ ನಡೆಯಲಿರುವ ಕ್ರೀಡಾಕೂಟದಲ್ಲಿ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶ, ಸವೀರ್‍ಸಸ್‌ ತಂಡದ ಒಟ್ಟು ಸುಮಾರು 7000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಒಟ್ಟು 35 ಕ್ರೀಡೆಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಖೋ-ಖೋ, ಯೋಗಾಸನ ಮತ್ತು ಮಲ್ಲಕಂಭ ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದೆ.

ಕ್ರೀಡಾಕೂಟಕ್ಕೆ ಗುಜರಾತ್‌ ಮೊದಲ ಬಾರಿಗೆ ಆತಿಥ್ಯ ವಹಿಸುತ್ತಿದೆ. ಅಹಮದಾಬಾದ್‌, ಗಾಂಧಿನಗರ, ಸೂರತ್‌, ವಡೋದರಾ, ರಾಜ್‌ಕೋಟ್‌ ಹಾಗೂ ಭಾವ್‌ನಗರ್‌ಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೈಕ್ಲಿಂಗ್‌ ಸ್ಪರ್ಧೆಗಳಿಗೆ ದೆಹಲಿ ಆತಿಥ್ಯ ನೀಡಲಿದೆ.

ತಾರಾ ಅಥ್ಲೀಟ್‌ಗಳು ಭಾಗಿ

ಒಲಿಂಪಿಕ್ಸ್‌ ಚಿನ್ನ ವಿಜೇತ ನೀರಜ್‌ ಚೋಪ್ರಾ ಸ್ಪರ್ಧಿಸುವುದು ಇನ್ನೂ ಖಚಿತವಾಗಿಲ್ಲ. ಆದರೆ ತಾರಾ ಅಥ್ಲೀಟ್‌ಗಳಿಗೆ ಕೊರತೆಯಿಲ್ಲ. ಮೀರಾಭಾಯಿ ಚಾನು, ಲವ್ಲೀನಾ ಬೊರ್ಗೊಹೈನ್‌, ಲಕ್ಷ್ಯ ಸೆನ್‌, ಶರತ್‌ ಕಮಲ್‌, ಮನಿಕಾ ಬಾತ್ರಾ, ಶ್ರೀಹರಿ ನಟರಾಜ್‌, ಮನು ಭಾಕರ್‌, ದ್ಯುತಿ ಚಾಂದ್‌, ಹಿಮಾ ದಾಸ್‌, ಮುರಳಿ ಶ್ರೀಶಂಕರ್‌, ಜ್ಯೋತಿ ಯರ್ರಾಜಿ ಸೇರಿ ಇನ್ನೂ ಅನೇಕ ಅಂತಾರಾಷ್ಟ್ರೀಯ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಮೋದಿಯಿಂದ ಚಾಲನೆ

ಗುರುವಾರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಟಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 1 ಲಕ್ಷಕ್ಕೂ ಹೆಚ್ಚು ಸಾಮರ್ಥ್ಯ ಹೊಂದಿರುವ ಮೋದಿ ಕ್ರೀಡಾಂಗಣವು ಭರ್ತಿಯಾಗುವ ನಿರೀಕ್ಷೆ ಇದೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭೌನೀಶ್‌

ಒಸಿಜೆಕ್‌(ಕ್ರೊವೇಷಿಯಾ): ಶೂಟರ್‌ ಭೌನೀಶ್‌ ಮೆಂಡಿರಟ್ಟ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವ ಶಾಟ್‌ಗನ್‌ ಚಾಂಪಿಯನ್‌ಶಿಪ್‌ನ ಪುರುಷರ ಟ್ರ್ಯಾಪ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸುವ ಮೂಲಕ ಭೌನೀಶ್‌ ಈ ಸಾಧನೆ ಮಾಡಿದರು.

ಅಥ್ಲೀಟ್‌ಗಳ ಕ್ಷೇಮಾಭಿವೃದ್ಧಿಗೆ ಅಭಿನವ್‌ ಬಿಂದ್ರಾ ಪಂಚ ಸೂತ್ರ

ಉತ್ತರಪ್ರದೇಶದ ಫರೀದಾಬಾದ್‌ನ 23 ವರ್ಷದ ಭೌನೀಶ್‌ ಫೈನಲ್‌ನಲ್ಲಿ 4ನೇ ಸ್ಥಾನ ಪಡೆದು ಪದಕ ಗೆಲ್ಲಲು ವಿಫಲವಾದರು. ಈ ಕೂಟದ ಪ್ರತಿ ಸ್ಪರ್ಧೆಯಲ್ಲಿ ಅಗ್ರ 4 ಸ್ಥಾನಗಳನ್ನು ಪಡೆಯುವ ಕ್ರೀಡಾಪಟುವಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಪ್ರವೇಶ ದೊರೆಯಲಿದೆ.

ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 1ರ ಗಡುವು

ನವದೆಹಲಿ: ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಕೇಂದ್ರ ಕ್ರೀಡಾ ಸಚಿವಾಲಯ ಗಡುವು ವಿಸ್ತರಿಸಿದೆ. ಈ ಮೊದಲು ಸೆ.27ರ ವರೆಗೂ ಅರ್ಜಿ ಸಲ್ಲಿಸಬಹುದಿತ್ತು. ಇದೀಗ ಅಕ್ಟೋಬರ್ 1ರ ವರೆಗೂ ಅವಕಾಶ ಕಲ್ಪಿಸಲಾಗಿದೆ. ಈ ವರ್ಷದಿಂದ ಕೇವಲ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಖೇಲ್‌ ರತ್ನ, ಅರ್ಜುನ ಪ್ರಶಸ್ತಿ, ಧ್ಯಾನ್‌ಚಂದ್‌ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Follow Us:
Download App:
  • android
  • ios