ನ್ಯಾಷನಲ್ ಗೇಮ್ಸ್‌ನಲ್ಲಿ ಮುಂದುವರೆದ ಕರ್ನಾಟಕದ ಪದಕ ಬೇಟೆಪದಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಕರ್ನಾಟಕಈಜು ಸ್ಪರ್ಧೆಯಲ್ಲಿ ಮುಂದುವರೆದ ಕರ್ನಾಟಕದ ಪ್ರಾಬಲ್ಯ

ಅಹಮದಾಬಾದ್‌(ಅ.06): 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಪದಕ ಬೇಟೆ ಮುಂದುವರಿದಿದ್ದು, ರಾಜ್ಯವು ಪದಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ. ರಾಜ್ಯದ ಈಜುಪಟುಗಳು ಪದಕ ಬೇಟೆ ಮುಂದುವರಿಸಿದರೆ, ಟೆನಿಸಿಗರು ದಾಖಲೆ ಪದಕ ಬಾಚಿಕೊಂಡಿದ್ದಾರೆ. ಬ್ಯಾಡ್ಮಿಂಟನ್‌ನಲ್ಲೂ ರಾಜ್ಯಕ್ಕೆ ಹಲವು ಪದಕಗಳು ದೊರೆಯುವ ನಿರೀಕ್ಷೆ ಮೂಡಿದೆ.

ಬುಧವಾರ 4*200 ಮೀ. ರಿಲೇ ಈಜು ಸ್ಪರ್ಧೆಯಲ್ಲಿ ರಾಜ್ಯ ಪುರುಷ ಹಾಗೂ ಮಹಿಳಾ ತಂಡಗಳು ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಜಯಿಸಿದವು. ಪುರುಷರ ತಂಡ 7 ನಿಮಿಷ 41.10 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರೆ, ಮಹಿಳೆಯರ ತಂಡ 8 ನಿಮಿಷ 51.59 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಮೊದಲ ಸ್ಥಾನ ಪಡೆಯಿತು. ರಿಲೇ ತಂಡದಲ್ಲೂ ರಾಜ್ಯವನ್ನು ಮುನ್ನಡೆಸಿದ್ದ ಹಾಶಿಕಾ ರಾಮಚಂದ್ರ ಮಹಿಳೆಯರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲೂ ರಾಷ್ಟ್ರೀಯ ದಾಖಲೆ(2:19.12)ಯೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು. ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟೊ್ರೕಕ್‌ ಸ್ಪರ್ಧೆಯಲ್ಲಿ ಮಾನವಿ ವರ್ಮಾಗೆ ಕಂಚು ದೊರೆಯಿತು.

ಇನ್ನೂ 3 ಪದಕ ಖಚಿತ: ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್‌ ಮಂಜುನಾಥ್‌, ಮಹಿಳಾ ಡಬಲ್ಸ್‌ನಲ್ಲಿ ಶಿಖಾ ಗೌತಮ್‌-ಅಶ್ವಿನಿ ಭಟ್‌, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಾಯಿ ಪ್ರತೀಕ್‌ ಫೈನಲ್‌ ಪ್ರವೇಶಿಸಿದ್ದಾರೆ. ರಾಜ್ಯಕ್ಕೆ ಕನಿಷ್ಠ 3 ಬೆಳ್ಳಿ ಪದಕ ಖಚಿತವಾಗಿದೆ. ಇನ್ನು ಪುರುಷರ ಸಿಂಗಲ್ಸ್‌ ಸೆಮೀಸ್‌ನಲ್ಲಿ ಸೋತ ರಘು, ಪುರುಷರ ಡಬಲ್ಸ್‌ನಲ್ಲಿ ನಿತಿನ್‌-ವೈಭವ್‌ ಕಂಚಿನ ಪದಕದ ಪಂದ್ಯಗಳಲ್ಲಿ ಆಡಲಿದ್ದಾರೆ.

Commonwealth Games 2026 ಕ್ರೀಡಾಕೂಟದಿಂದ ಕುಸ್ತಿ ಔಟ್, ಶೂಟಿಂಗ್‌ಗೆ ಮತ್ತೆ ಚಾನ್ಸ್‌..!

ಟೆನಿಸಿಗರ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ!

ಬುಧವಾರ ಪುರುಷರ ಸಿಂಗಲ್ಸ್‌ನಲ್ಲಿ ಪ್ರಜ್ವಲ್‌ ದೇವ್‌ ಹಾಗೂ ಜಿ.ಮನೀಶ್‌ ಕಂಚಿನ ಪದಕಗಳನ್ನು ಗೆದ್ದರೆ, ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಪರಾಭವಗೊಂಡ ಶರ್ಮದಾ ಬಾಲು ಬೆಳ್ಳಿಗೆ ತೃಪ್ತಿಪಟ್ಟರು. ಮಿಶ್ರ ಡಬಲ್ಸ್‌ನಲ್ಲಿ ಶರ್ಮದಾ ಹಾಗೂ ಪ್ರಜ್ವಲ್‌ ಜೋಡಿ ರಜತ ಪದಕ ಪಡೆಯಿತು. ಕರ್ನಾಟಕ ಈ ಬಾರಿ ಎಲ್ಲಾ ವಿಭಾಗಗಳಲ್ಲೂ ಸ್ಪರ್ಧಿಸಿದ್ದು ಮಾತ್ರವಲ್ಲ, ಎಲ್ಲಾ ವಿಭಾಗಗಳಲ್ಲೂ ಪದಕ ಜಯಿಸಿತು. ತಂಡ ವಿಭಾಗಗಳಲ್ಲಿ 2, ಸಿಂಗಲ್ಸ್‌ನಲ್ಲಿ 2, ಡಬಲ್ಸ್‌ನಲ್ಲಿ 2 ಹಾಗೂ ಮಿಶ್ರ ಡಬಲ್ಸ್‌ನಲ್ಲಿ 1 ಪದಕ ದೊರೆಯಿತು. ರಾಷ್ಟ್ರೀಯ ಗೇಮ್ಸ್‌ನಲ್ಲಿ ಇದು ರಾಜ್ಯದ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ಎನಿಸಿದೆ.

ರಾಜ್ಯದ ಖಾತೆಯಲ್ಲಿ ಈಗ ಒಟ್ಟು 52 ಪದಕ

ಕರ್ನಾಟಕ 14 ಚಿನ್ನ, 14 ಬೆಳ್ಳಿ, 24 ಕಂಚಿನೊಂದಿಗೆ ಒಟ್ಟು 52 ಪದಕ ಜಯಿಸಿ ಪದಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ರಾಜ್ಯವು ಅಗ್ರ-5ರಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಈ ವರೆಗೂ ಈಜು ಸ್ಪರ್ಧೆಯಲ್ಲಿ ಅತಿಹೆಚ್ಚು 12 ಚಿನ್ನ, 3 ಬೆಳ್ಳಿ, 6 ಕಂಚು ದೊರೆತರೆ, ಅಥ್ಲೆಟಿಕ್ಸ್‌ನಲ್ಲಿ 3 ಬೆಳ್ಳಿ, 2 ಕಂಚು, ಸೈಕ್ಲಿಂಗ್‌ನಲ್ಲಿ 3 ಕಂಚು, ಜಿಮ್ನಾಸ್ಟಿಕ್ಸ್‌ನಲ್ಲಿ ತಲಾ 1 ಬೆಳ್ಳಿ ಹಾಗೂ ಕಂಚು, ಖೋ-ಖೋನಲ್ಲಿ 2 ಕಂಚು, ನೆಟ್‌ಬಾಲ್‌ನಲ್ಲಿ ಒಂದು ಕಂಚು, ರೋಲರ್‌ ಸ್ಪೋಟ್ಸ್‌ರ್‍ನಲ್ಲಿ 1 ಚಿನ್ನ, 1 ಬೆಳ್ಳಿ, 3 ಕಂಚು, ಶೂಟಿಂಗ್‌ನಲ್ಲಿ 1 ಬೆಳ್ಳಿ, 1 ಕಂಚು, ಟೇಬಲ್‌ ಟೆನಿಸ್‌ನಲ್ಲಿ 1 ಬೆಳ್ಳಿ, ಟೆನಿಸ್‌ನಲ್ಲಿ 1 ಚಿನ್ನ, 3 ಬೆಳ್ಳಿ, 4 ಕಂಚು, ವೇಟ್‌ಲಿಫ್ಟಿಂಗ್‌ನಲ್ಲಿ 1 ಬೆಳ್ಳಿ, ಕುಸ್ತಿಯಲ್ಲಿ 1 ಕಂಚು ಜಯಿಸಿದೆ.