ಕ್ಲೇ ಕೋರ್ಟ್ ಕಿಂಗ್ ಖ್ಯಾತಿಯ ಸ್ಪೇನ್ ಟೆನಿಸಿಗ ರಾಫೇಲ್ ನಡಾಲ್ ಆಸ್ಟ್ರೇಲಿಯಾ ಓಪನ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯಲ್ಲಿ ಜಯದ ಅಭಿಯಾನ ಮುಂದುವರೆಸಿದ್ದು, ಅಂತಿಮ ಹದಿನಾರರ ಹಂತಕ್ಕೇರಿದ್ದಾರೆ.

ಮೆಲ್ಬೋರ್ನ್ (ಜ.21): ಕ್ಲೇ ಕೋರ್ಟ್ ಕಿಂಗ್ ಖ್ಯಾತಿಯ ಸ್ಪೇನ್ ಟೆನಿಸಿಗ ರಾಫೇಲ್ ನಡಾಲ್ ಆಸ್ಟ್ರೇಲಿಯಾ ಓಪನ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯಲ್ಲಿ ಜಯದ ಅಭಿಯಾನ ಮುಂದುವರೆಸಿದ್ದು, ಅಂತಿಮ ಹದಿನಾರರ ಹಂತಕ್ಕೇರಿದ್ದಾರೆ.

ಇಲ್ಲಿನ ರೋಡ್ ಲೇವರ್ ಅರೇನಾದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಶುಕ್ರವಾರದ ಪಂದ್ಯದಲ್ಲಿ ಜರ್ಮನಿಯ ಉದಯೋನ್ಮುಖ ಆಟಗಾರ ಅಲೆಕ್ಸಾಂಡರ್ ಜ್ವರೇವ್ ವಿರುದ್ಧದ ಸುದೀರ್ಘ ಕಾದಾಟದಲ್ಲಿ 4-6, 6-3, 6-7 (5), 6-3, 6-2 ಸೆಟ್‌ಗಳಲ್ಲಿ ಗೆಲುವು ಪಡೆದ ನಡಾಲ್, ಇದೀಗ ಫ್ರಾನ್ಸ್‌ನ ಗೇಲ್ ಮೊಂಫಿಲ್ಸ್ ಇಲ್ಲವೇ ಜರ್ಮನಿಯ ಮತ್ತೋರ್ವ ಆಟಗಾರ ಫಿಲಿಪ್ ಕೊಲ್‌ಶ್ರೀಬರ್ ಎದುರು ಕಾದಾಡಲಿದ್ದಾರೆ.

ಮಕರೋವಾ ಮುಗುಳ್ನಗೆ

ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರಷ್ಯನ್ ಆಟಗಾರ್ತಿ ಎಕ್ತರೀನಾ ಮಕರೋವಾ ಮಾಜಿ ವಿಂಬಲ್ಡನ್ ಚಾಂಪಿಯನ್ ಸ್ಲೊವೇಕಿಯಾದ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ 6-2, 6-7(3-7) ಮತ್ತು6-3 ಸೆಟ್‌ಗಳಿಂದ ಬ್ರಿಟನ್ ಆಟಗಾರ್ತಿ ಜೋಹಾನ್ನ ಕೊಂಟಾ ವಿಶ್ವದ ಮಾಜಿ ನಂ.1 ಆಟಗಾರ್ತಿ ಕೆರೋಲಿನಾ ವೋಜ್ನಿಯಾಕಿಯನ್ನು 6-3, 6-1 ನೇರ ಸೆಟ್‌ಗಳಿಂದ ಮಣಿಸಿ ಪ್ರಿಕ್ವಾರ್ಟರ್ ತಲುಪಿದರು.

ಮಿರ್ಜಾ-ಬೋಪಣ್ಣ ಜೋಡಿ 2 ನೇ ಸುತ್ತಿಗೆ

ಪುರುಷರ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸುತ್ತಿನಲ್ಲೇ ಹೋರಾಟ ಮುಗಿಸಿದ ರೋಹನ್ ಬೋಪಣ್ಣ ಇದೀಗ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಅರಸುತ್ತಿದ್ದು, ದ್ವಿತೀಯ ಸುತ್ತಿಗೆ ಧಾವಿಸಿದ್ದಾರೆ. ಅಂತೆಯೇ, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಈಗಾಗಲೇ ಪ್ರಿಕ್ವಾರ್ಟರ್‌ಫೈನಲ್ ತಲುಪಿರುವ ಸಾನಿಯಾ ಕೂಡ ಮಿಶ್ರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದರು. ಕೆನಡಾದ ಗೇಬ್ರಿಯೇಲ ಡಬ್ರೋಸ್ಕಿ ಹಾಗೂ ಬೋಪಣ್ಣ ಜೋಡಿ ಮೈಕೆಲ್ ವೀನಸ್ ಮತ್ತು ಕಟರಿನಾ ಸ್ರಿಬೋಟ್ನಿಕ್ ಎದುರು 6-4 , 6-7, 10-7 ಸೆಟ್‌ಗಳಲ್ಲಿ ಜಯ ಪಡೆದರೆ, ಸಾನಿಯಾ ಮತ್ತು ಕ್ರೊವೇಷಿಯಾದ ಇವಾನ್ ಡೊಡಿಗ್ ಜೋಡಿ ಮೊದಲ ಸುತ್ತಿನಲ್ಲಿ 7-5, 6-4 ಸೆಟ್‌ಗಳಿಂದ ಹಾಲಿ ಯುಎಸ್ ಚಾಂಪಿಯನ್ನರಾದ ಲೌರಾ ಸಿಗೆಮುಂಡ್ ಮತ್ತು ಮಾಟೆ ಪಾವಿಕ್ ವಿರುದ್ಧ ಜಯಿಸಿತು. ಇನ್ನು, ಬಾಲಕರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಲ್ಲಿ ಸಿದ್ಧಾಂತ್ ಭಾಟಿಯಾ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ಕ್ರೊನಾಕ್ರಕ್ ವಿರುದ್ಧ 6-2, 6-7, ೫-೭ ಸೆಟ್‌ಗಳಲ್ಲಿ ಸೋತರೆ, ಬಾಲಕಿಯರ ವಿಭಾಗದಲ್ಲಿ ಸ್ಥಳೀಯ ಆಟಗಾರ್ತಿ ಕೈಟ್ಲಿನ್ ಸ್ಟೈನೆಸ್ ಒಡ್ಡಿದ ಕಠಿಣ ಪ್ರತಿರೋಧವನ್ನು 6-4, 3-6, 7-5 ಸೆಟ್‌ಗಳಲ್ಲಿ ಮೆಟ್ಟಿನಿಂತರು.