ಶುಕ್ರವಾರ ನಡೆಯಲಿರುವ ಸೆಮೀಸ್‌ನಲ್ಲಿ ಡೆಲ್ ಪೊಟ್ರೋ, ಸ್ಪೇನ್‌ನ ಆಟಗಾರ ರಾಫೆಲ್ ನಡಾಲ್ ಅವರನ್ನು ಎದುರಿಸಲಿದ್ದಾರೆ.

ನ್ಯೂಯಾರ್ಕ್(ಸೆ.07):ಯುಎಸ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌'ಫೈನಲ್‌ನಲ್ಲಿ ದಾಖಲೆ ಗ್ರ್ಯಾಂಡ್ ಸ್ಲಾಂ ಒಡೆಯ ಸ್ವಿಜರ್‌'ಲೆಂಡ್‌'ನ ರೋಜರ್ ಫೆಡರರ್, ಅರ್ಜೇಂಟೀನಾದ ಡೆಲ್ ಪೊಟ್ರೋ ಎದುರು ಸೋಲುಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮತ್ತೊಬ್ಬ ತಾರಾ ಆಟಗಾರ ಅಗ್ರ ಶ್ರೇಯಾಂಕಿತ ಸ್ಪೇನ್‌'ನ ರಾಫೆಲ್ ನಡಾಲ್, ರಷ್ಯಾದ ಆ್ಯಂಡ್ರೆ ರುಬ್ಲೆವ್ ವಿರುದ್ಧ ಗೆದ್ದು ಸೆಮೀಸ್ ಪ್ರವೇಶಿಸಿದ್ದಾರೆ.

ಸಿಂಗಲ್ಸ್ ಸೆಮೀಸ್‌'ನಲ್ಲಿ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಸೆಣಸಲಿದ್ದಾರೆ ಎನ್ನುವ ನೀರಿಕ್ಷೆಯಿತ್ತು. ಆದರೆ ಆ ನೀರಿಕ್ಷೆ ಫೆಡರರ್ ಸೋಲಿನೊಂದಿಗೆ ಹುಸಿಯಾಗಿದೆ. ಈ ವರ್ಷಂತ್ಯಾದ ಗ್ರ್ಯಾಂಡ್ ಸ್ಲಾಮ್‌'ನಲ್ಲಿ ಇಬ್ಬರೂ ದಿಗ್ಗಜರ ಆಟವನ್ನು ಕಣ್ತುಂಬಿಕೊಳ್ಳುವ ಟೆನಿಸ್ ಪ್ರಿಯರ ಆಶಯ ಈಡೇರಿಲ್ಲ.

ಕ್ವಾರ್ಟರ್‌'ಫೈನಲ್‌'ನಲ್ಲಿ 3ನೇ ಶ್ರೇಯಾಂಕಿತ ರೋಜರ್ ಫೆಡರರ್ 5-7, 6-3, 6-7(8-10), 4-6 ಸೆಟ್‌'ಗಳಿಂದ ಅರ್ಜೇಂಟೀನಾದ ಜಾನ್ ಮಾರ್ಟಿನ್ ಡೆಲ್ ಪೊಟ್ರೋ ಎದುರು ಪರಾಭವ ಹೊಂದಿದರು. 2009ರ ಯುಎಸ್ ಓಪನ್ ಫೈನಲ್‌'ನಲ್ಲಿ ಪೊಟ್ರೋ, ಫೆಡರರ್ ವಿರುದ್ಧ ಗೆಲುವು ಪಡೆದು ಟ್ರೋಫಿ ಜಯಿಸಿದ್ದರು.

ಶುಕ್ರವಾರ ನಡೆಯಲಿರುವ ಸೆಮೀಸ್‌ನಲ್ಲಿ ಡೆಲ್ ಪೊಟ್ರೋ, ಸ್ಪೇನ್‌ನ ಆಟಗಾರ ರಾಫೆಲ್ ನಡಾಲ್ ಅವರನ್ನು ಎದುರಿಸಲಿದ್ದಾರೆ.

ಸೆಮೀಸ್‌'ಗೆ ನಡಾಲ್: ಮತ್ತೊಂದು ಸಿಂಗಲ್ಸ್ ಕ್ವಾರ್ಟರ್‌ನಲ್ಲಿ ನಂ.1 ಶ್ರೇಯಾಂಕಿತ ರಾಫೆಲ್ ನಡಾಲ್ 6-1, 6-2, 6-2 ಸೆಟ್‌'ಗಳಿಂದ ಶ್ರೇಯಾಂಕ ರಹಿತ ರಷ್ಯಾದ ಆ್ಯಂಡ್ರೆ ರುಬ್ಲೆವ್ ಎದುರು ಸುಲಭ ಜಯ ಪಡೆದರು. ಮೂರನೇ ಯುಎಸ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ನಡಾಲ್ ಜಯದ ವಿಶ್ವಾಸದಲ್ಲಿದ್ದಾರೆ.

2010 ಮತ್ತು 2013ರಲ್ಲಿ ನಡಾಲ್ ಯುಎಸ್ ಓಪನ್ ಗೆದ್ದಿದ್ದರು.