ಆರನೇ ವಿಕೆಟ್'ಗೆ ಜತೆಯಾದ ಪೊಲ್ಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ಜೋಡಿ ಭರ್ಜರಿ ಜತೆಯಾಟದ ಮೂಲಕ ಆರ್'ಸಿಬಿ ಗೆಲುವನ್ನು ಕಸಿದುಕೊಂಡರು.
ಬೆಂಗಳೂರು(ಏ.14): ಸಾಮ್ಯುಯಲ್ ಬದ್ರಿ ಅವರ ಕರಾರುವಕ್ಕಾದ ದಾಳಿಯ ನಡುವೆಯೂ ಕೆಚ್ಚದೆಯ ಹೋರಾಟ ನಡೆಸಿದ ಕಿರಾನ್ ಪೊಲ್ಲಾರ್ಡ್ ಮುಂಬೈ ಇಂಡಿಯನ್ಸ್'ಗೆ ಮತ್ತೊಂದು ಗೆಲುವನ್ನು ತಂದಿಟ್ಟರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 10ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ಮೊದಲ ವಿಕೆಟ್'ಗೆ ಮಂದಗತಿಯ ಬ್ಯಾಟಿಂಗ್ ನಡೆಸಿದ ಗೇಲ್ ಹಾಗೂ ಕೊಹ್ಲಿ ಜೋಡಿ 9.2 ಓವರ್'ಗಳಲ್ಲಿ 63ರನ್ ಕಲೆಹಾಕಿತು. ಗಾಯದ ಸಮಸ್ಯೆಯಿಂದಾಗಿ ಮೊದಲ ಮೂರು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಭರ್ಜರಿಯಾಗಿಯೇ ಕಮ್'ಬ್ಯಾಕ್ ಮಾಡಿದರು. ಒಟ್ಟು 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್'ಗಳ ನೆರವಿನಿಂದ 62ರನ್ ಬಾರಿಸಿದರು. ಕೊಹ್ಲಿ ಪೆವಿಲಿಯನ್ ಸೇರಿದ ಬಳಿಕ ಡಿವಿಲಿಯರ್ಸ್ ಜಾದೂ ಮಾಡುತ್ತಾರೆ ಎನ್ನುವ ನಿರೀಕ್ಷೆಯನ್ನು ಹುಸಿಗೊಳಿಸಿದರು. ಎಬಿಡಿ ಔಟ್ ಆಗುತ್ತಿದ್ದಂತೆ ದಿಢೀರ್ ಕುಸಿತ ಕಂಡ ಆರ್'ಸಿಬಿ 20 ಓವರ್'ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಬಾರಿಸಲಷ್ಟೇ ಶಕ್ತವಾಯಿತು.
ಸವಾಲಿನ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್'ಗೆ ಸ್ಟುವರ್ಟ್ ಬಿನ್ನಿ ಮೊದಲ ಆಘಾತವನ್ನು ನೀಡಿದರು. ಸಾಮ್ಯಯಲ್ ಬದ್ರಿ 10ನೇ ಆವೃತ್ತಿಯಲ್ಲಿ ಭರ್ಜರಿಯಾಗಿಯೇ ಕಮ್'ಬ್ಯಾಕ್ ಮಾಡಿದರು. ಮೂರನೇ ಓವರ್'ನಲ್ಲಿ ಅದ್ಭುತ ಕೈಚಳಕ ತೋರಿದ ಬದ್ರಿ ಮುಂಬೈ ಇಂಡಿಯನ್ಸ್'ನ ಪಾರ್ಥೀವ್ ಪಟೇಲ್, ಮಿಚೆಲ್ ಮೆಕ್'ಗ್ಲಾರೆನ್ ಹಾಗೂ ರೋಹಿತ್ ಶರ್ಮಾ ಅವರನ್ನು ಸತತ ಮೂರು ಎಸೆತಗಳಲ್ಲಿ ವಿಕೆಟ್ ಪಡೆಯುವ ಮೂಲಕ ಈ ಸಾಲಿನ ಐಪಿಎಲ್'ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ಗರಿಮೆಗೆ ಭಾಜನರಾದರು.
ಒಂದು ಹಂತದಲ್ಲಿ 7 ರನ್'ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿದ್ದ ಮುಂಬೈ ಇಂಡಿಯನ್ಸ್'ಗೆ ಐದನೇ ವಿಕೆಟ್'ಗೆ ನಿತಿಶ್ ರಾಣಾ ಹಾಗೂ ಪೊಲ್ಲಾರ್ಡ್ ಅಲ್ಪ ಚೇತರಿಕೆ ನೀಡಿದರು. 11 ರನ್ ಬಾರಿಸಿ ಕ್ರೀಸ್'ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ನಿತಿಶ್ ರಾಣಾ ಅವರನ್ನು ಬದ್ರಿ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಆರ್'ಸಿಬಿಗೆ ಗೆಲುವಿನ ಆಸೆ ಮೂಡಿಸಿದರು. ಆದರೆ ಆರನೇ ವಿಕೆಟ್'ಗೆ ಜತೆಯಾದ ಪೊಲ್ಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ಜೋಡಿ ಭರ್ಜರಿ ಜತೆಯಾಟದ ಮೂಲಕ ಆರ್'ಸಿಬಿ ಗೆಲುವನ್ನು ಕಸಿದುಕೊಂಡರು.
ಏಕಾಂಗಿ ಹೋರಾಟ ನಡೆಸಿದ ಪೊಲ್ಲಾರ್ಡ್ 47 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಐದು ಸಿಕ್ಸರ್'ಗಳ ನೆರವಿನಿಂದ 70ರನ್ ಬಾರಿಸಿ ಚಾಹಲ್'ಗೆ ವಿಕೆಟ್ ಒಪ್ಪಿಸಿದರು. ಆ ವೇಳೆಗಾಗಲೇ ಮುಂಬೈ ಗೆಲುವಿನ ಹೊಸ್ತಿಲಲ್ಲಿ ಬಂದು ನಿಂತಿತ್ತು. ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ವಿಜಯದ ನಗೆ ಬೀರಿತು.
ಸಂಕ್ಷಿಪ್ತ ಸ್ಕೋರ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು: 142/5
ವಿರಾಟ್ ಕೊಹ್ಲಿ: 62
ಕ್ರಿಸ್ ಗೇಲ್ : 22
ಮೆಕ್'ಗ್ಲಾರೆನ್ : 20/2
ಮುಂಬೈ ಇಂಡಿಯನ್ಸ್: 145/6
ಕಿರಾನ್ ಪೊಲ್ಲಾರ್ಡ್ ; 70
ಕೃನಾಲ್ ಪಾಂಡ್ಯ : 37
ಸಾಮ್ಯಯಲ್ ಬದ್ರಿ: 9/4
