ರೋಹ್ಟಕ್‌(ಅ.06): ವೇಗಿ ಧವಳ್‌ ಕುಲಕರ್ಣಿ (31ಕ್ಕೆ 4) ಹಾಗೂ ತುಷಾರ್‌ ದೇಶಪಾಂಡೆ (25ಕ್ಕೆ 4) ನಡೆಸಿದ ಜಂಟಿ ದಾಳಿಗೆ ಕಂಗೆಟ್ಟತಮಿಳುನಾಡಿನ ವಿರುದ್ಧ ಮುಂಬೈ ಮೇಲುಗೈ ಸಾಧಿಸಿದೆ.

ಗುರುವಾರ ಆರಂಭವಾದ ಈ ಋುತುವಿನ ರಣಜಿ ಪಂದ್ಯಾವಳಿಯು ಮೊಟ್ಟಮೊದಲ ಬಾರಿಗೆ ತಟಸ್ಥ ತಾಣದಲ್ಲಿ ನಡೆಯುತ್ತಿದ್ದು, ತಮಿಳುನಾಡು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 45.3 ಓವರ್‌ಗಳಲ್ಲಿ 87 ರನ್‌ಗಳಿಗೆ ಆಲೌಟ್‌ ಆಯಿತು.

ಇದಕ್ಕೆ ಉತ್ತರವಾಗಿ ದಿನದಾಟ ನಿಂತಾಗ ಮುಂಬೈ 32 ಓವರ್‌ಗಳಲ್ಲಿ 4 ವಿಕೆಟ್‌ಗೆ 85 ರನ್‌ ಗಳಿಸಿ ಇನ್ನಿಂಗ್ಸ್‌ ಮುನ್ನಡೆಯನ್ನು ಖಾತ್ರಿಪಡಿಸಿತು. ವಿಕೆಟ್‌ಕೀಪರ್‌ ಹಾಗೂ ನಾಯಕ ಆದಿತ್ಯ ತಾರೆ 22 ಮತ್ತು ಕೌಸ್ತುಭ್‌ ಪವಾರ್‌ 26 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು.

ಮುನ್ನಡೆ ಹಾದಿಯಲ್ಲಿ ಛತ್ತೀಸ್‌ಗಢ: ಇನ್ನು ಇದೇ ಮೊದಲ ಬಾರಿಗೆ ರಣಜಿ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಛತ್ತೀಸ್‌ಗಢ ಇನ್ನಿಂಗ್ಸ್‌ಮುನ್ನಡೆಯತ್ತ ಸಾಗಿದೆ. ತ್ರಿಪುರಾವನ್ನು 118 ರನ್‌ಗಳಿಗೆ ಕಟ್ಟಿಹಾಕಿದ ಮೊಹಮದ್‌ ಕೈಫ್‌ ಸಾರಥ್ಯದ ಛತ್ತೀಸ್‌ಗಢ 28 ಓವರ್‌ಗಳಲ್ಲಿ 3 ವಿಕೆಟ್‌ಗೆ 77 ರನ್‌ ಗಳಿಸಿತ್ತು. ಅಶುತೋಷ್‌ ಸಿಂಗ್‌ ಮತ್ತು ಕೈಫ್‌ ಕ್ರಮವಾಗಿ 31 ಹಾಗೂ 5 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು.