ಇಲ್ಲಿನ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ಹಾಗೂ ಕೇರಳ ಬ್ಲಾಸ್ಟರ್ಸ್‌ ತಂಡಗಳು ಸೆಣಸಾಡಲಿವೆ.
ಕೊಚ್ಚಿ(ನ.17): ಇಂಡಿಯನ್ ಸೂಪರ್ ಲೀಗ್ 4ನೇ ಆವೃತ್ತಿಗೆ ಕೊಚ್ಚಿಯಲ್ಲಿ ಇಂದು ಸಂಜೆ ಅದ್ಧೂರಿ ಚಾಲನೆ ದೊರೆಯಲಿದೆ. ಈ ಬಾರಿ 10 ತಂಡಗಳು ಕಣಕ್ಕಿಳಿಯಲಿದ್ದು, ಲೀಗ್ ಬರೋಬ್ಬರಿ 4 ತಿಂಗಳ ಕಾಲ ನಡೆಯಲಿದೆ. ಈ ಬಾರಿ ಲೀಗ್ ಹಾಗೂ ನಾಕೌಟ್ ಸೇರಿ ಒಟ್ಟು 95 ಪಂದ್ಯಗಳು ನಡೆಯಲಿದ್ದು, ಚಾಂಪಿಯನ್ ಆಗುವ ತಂಡ ಎಎಫ್'ಸಿ ಕಪ್'ಗೆ ಅರ್ಹತೆ ಪಡೆಯಲಿದೆ.
ಇಲ್ಲಿನ ಜವಾಹರ್ಲಾಲ್ ನೆಹರು ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಸೆಣಸಾಡಲಿವೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಕೋಲ್ಕತಾ ತಂಡದ ಸಹ ಮಾಲೀಕರಾದರೆ, ದಿಗ್ಗಜ ಬ್ಯಾಟ್ಸ್'ಮನ್ ಸಚಿನ್ ತೆಂಡುಲ್ಕರ್ ಕೇರಳ ತಂಡದ ಸಹ ಮಾಲೀಕತ್ವ ಹೊಂದಿದ್ದಾರೆ.
ಕಳೆದ ತಿಂಗಳು ನಡೆದ ಅಂಡರ್-17 ಫುಟ್ಬಾಲ್ ವಿಶ್ವಕಪ್'ಗೆ ದೇಶದೆಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದೀಗ ಐಎಸ್ಎಲ್'ಗೂ ಅಷ್ಟೇ ಪ್ರಮಾಣದಲ್ಲಿ ಅಭಿಮಾನಿಗಳು ಬೆಂಬಲಿಸಲಿದ್ದಾರೆಯೇ ಎನ್ನುವ ಕುತೂಹಲ ಶುರುವಾಗಿದೆ. ಈ ಬಾರಿ ಹೆಚ್ಚು ಭಾರತೀಯ ಆಟಗಾರರು, ಹೆಚ್ಚು ತಂಡಗಳು, ಹೆಚ್ಚು ಪಂದ್ಯಗಳು ನಡೆಯಲಿದ್ದು, ಬೆಂಗಳೂರು ಎಫ್'ಸಿ ತಂಡ ಪಂದ್ಯಾವಳಿಗೆ ಪದಾರ್ಪಣೆ ಮಾಡಲಿರುವುದರಿಂದ ರಾಜ್ಯದ ಫುಟ್ಬಾಲ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.
ಉದ್ಘಾಟನೆಗೆ ಸಲ್ಮಾನ್, ಕತ್ರೀನಾ
ಪಂದ್ಯ ರಾತ್ರಿ 8ಕ್ಕೆ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಸಮಾರಂಭದ ಕಿಚ್ಚು ಹೆಚ್ಚಿಸಲಿದ್ದಾರೆ. ಸಂಜೆ 7.15ಕ್ಕೆ ಅದ್ಧೂರಿ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದೆ.
ಕಳೆದ ಐಎಸ್ಎಲ್ ಚಾಂಪಿಯನ್ಸ್:
2014 ಅಟ್ಲೆಟಿಕೊ ಡಿ ಕೋಲ್ಕತಾ
2015 ಚೆನ್ನೈಯನ್ ಎಫ್ಸಿ
2016 ಅಥ್ಲೆಟಿಕೊ ಡಿ ಕೋಲ್ಕತಾ
