ನವದೆಹಲಿ[ಮೇ.21]: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ, ಪೇಂಟರ್‌ ಆಗಬೇಕು ಎನ್ನುವುದು ತಮ್ಮ ಬಾಲ್ಯದ ಕನಸು ಎನ್ನುವ ವಿಷಯವನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಜತೆಗೆ ಕ್ರಿಕೆಟ್‌ನಿಂದ ದೂರವಾದ ಬಳಿಕ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲಕ್ಕೆ ಉತ್ತರಿಸಿದ್ದಾರೆ. ಇದರೊಂದಿಗೆ ನಿವೃತ್ತಿಯ ಚರ್ಚೆ ಮತ್ತೆ ಆರಂಭವಾಗುವಂತೆ ಮಾಡಿದ್ದಾರೆ.

ವಿಶ್ವಕಪ್ 2019: 4ನೇ ಕ್ರಮಾಂಕದಲ್ಲಿ ಆಡ್ತಾರ ಧೋನಿ?

ಐಸಿಸಿ ಏಕದಿನ ವಿಶ್ವಕಪ್‌ ಬಳಿಕ ಧೋನಿ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳುಗಳಿಂದ ಹರಿದಾಡುತ್ತಿದ್ದು, ವಿಶೇಷ ವಿಡಿಯೋವೊಂದರಲ್ಲಿ ಅವರು ತಾವು ನಿವೃತ್ತಿ ಬಳಿಕ ಚಿತ್ರಕಾರನಾಗುವುದಾಗಿ ತಿಳಿಸಿದ್ದಾರೆ. ‘ನಾನು ನಿಮ್ಮೊಂದಿಗೆ ಒಂದು ರಹಸ್ಯವನ್ನು ಹಂಚಿಕೊಳ್ಳಬೇಕು. ಬಾಲ್ಯದಿಂದಲೂ ನನಗೆ ಚಿತ್ರಕಾರನಾಗಬೇಕು ಎನ್ನುವ ಆಸೆಯಿದೆ. ನಾನು ಸಾಕಷ್ಟುಕ್ರಿಕೆಟ್‌ ಆಡಿದ್ದೇನೆ. ಹೀಗಾಗಿ ಈಗ ನಾನು ಏನು ಇಷ್ಟಪಡುತ್ತೇನೆ ಅದನ್ನು ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಹಾಗಾಗಿ ಕೆಲ ಚಿತ್ರಗಳನ್ನು ಬಿಡಿಸಿದ್ದೇನೆ’ ಎಂದು ಧೋನಿ ವಿಡಿಯೋದಲ್ಲಿ ಹೇಳಿದ್ದಾರೆ.

 

ಟೀಕಿಸಿದವರೇ ಹೇಳುತ್ತಿದ್ದಾರೆ ವಿಶ್ವಕಪ್ ಗೆಲುವಿಗೆ ಧೋನಿ ಇರಲೇಬೇಕು!

ಧೋನಿ 3 ಪೇಂಟಿಂಗ್‌ಗಳನ್ನು ವಿಡಿಯೋದಲ್ಲಿ ಪ್ರದರ್ಶಿಸಿದ್ದಾರೆ. ಮೊದಲನೆಯದು ನಿಸರ್ಗದ ಚಿತ್ರ, ಎರಡನೇಯದನ್ನು ಅವರು, ‘ಭವಿಷ್ಯದ ವಿಮಾನ’ ಎಂದು ಬಣ್ಣಿಸಿದ್ದಾರೆ. 3ನೇ ಚಿತ್ರದಲ್ಲಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಜೆರ್ಸಿ ತೊಟ್ಟು ಆಡುತ್ತಿರುವ ತಮ್ಮದೇ ಚಿತ್ರವನ್ನು ಬಿಡಿಸಿರುವ ಧೋನಿ, ಆ ಚಿತ್ರವನ್ನು ತಮ್ಮ ನೆಚ್ಚಿನ ಚಿತ್ರ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ತಮ್ಮ ಪೇಂಟಿಂಗ್‌ಗಳ ಪ್ರದರ್ಶನವನ್ನು ಏರ್ಪಡಿಸುವುದಾಗಿಯೂ ಹೇಳಿರುವ ಧೋನಿ, ಅಭಿಮಾನಿಗಳಿಂದ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆಯುವುದಾಗಿ ತಿಳಿಸಿದ್ದಾರೆ.