ನವದೆಹಲಿ(ಸೆ.13): ಟೀಂ ಇಂಡಿಯಾ ಮಾಜಿ ನಾಯಕ ಸದ್ಯ ಏಷ್ಯಾ ಕಪ್ ಟೂರ್ನಿ ಆಡಲು ತಯಾರಿ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 15 ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಧೋನಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಏಷ್ಯಾಕಪ್ ಟೂರ್ನಿ ತಯಾರಿ ಬೆನ್ನಲ್ಲೇ, ಎಂ ಎಸ್ ಧೋನಿ 2019ರ ವಿಶ್ವಕಪ್ ಟೂರ್ನಿ ಆಡಬೇಕು ಅನ್ನೋ ಕೂಗು ಕೇಳಿಬಂದಿದೆ. ವಿರಾಟ್ ಕೊಹ್ಲಿ ನೇತೃತ್ವದ ಯುವ ಟೀಂ ಇಂಡಿಯಾಗೆ ಧೋನಿ ಮಾರ್ಗದರ್ಶನ ಅಗತ್ಯ ಅನ್ನೋದು ಕ್ರಿಕೆಟ್ ಪಂಡಿತರ ಮಾತು.

ಧೋನಿ 2019ರ ವಿಶ್ವಕಪ್ ಕುರಿತು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. 2019ರ ವಿಶ್ವಕಪ್ ಟೂರ್ನಿ ವರೆಗೆ ಧೋನಿ ಟೀಂ ಇಂಡಿಯಾ ಪರ ಆಡಬೇಕು. ರಿಷಬ್ ಪಂತ್‌ಗೆ ಅವಕಾಶ ನೀಡಿದರೂ, ಧೋನಿ ಅನುಭವ ತಂಡಕ್ಕೆ ನೆರವಾಗಲಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.

ರಿಷಬ್ ಪಂತ್ ಮುಂದಿನ ಎಲ್ಲಾ ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆದರೂ ಗರಿಷ್ಠ 15 ರಿಂಜ 16 ಪಂದ್ಯ ಆಡಲಿದ್ದಾರೆ. ಆದರೆ ಧೋನಿ 300 ಏಕದಿನ ಪಂದ್ಯ ಆಡಿದ ಅನುಭವ ಇದೆ. ಜೊತೆಗೆ ಏಕಾಂಗಿಯಾಗಿ ತಂಡವನ್ನ ಗೆಲ್ಲಿಸಿಕೊಟ್ಟಿದ್ದಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ತಂಡವನ್ನ ಯಶಸ್ವಿಯಾಗಿ ಮುನ್ನಡೆ ಗೆಲುವು ತಂದುಕೊಟ್ಟಿದ್ದಾರೆ. ಹೀಗಾಗಿ ಧೋನಿಗಿಂತ ಉತ್ತಮ ಆಟಗಾರ ಮತ್ತೊಬ್ಬನಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.