ರಾಂಚಿ(ಸೆ.13): ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ ಎಂ ಎಸ್ ಧೋನಿ. 2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ಧೋನಿ ಹಲವು ದಾಖಲೆ ಬರೆದಿದ್ದಾರೆ.

2017ರಲ್ಲಿ ಎಂ ಎಸ್ ಧೋನಿ ಏಕದಿನ ಹಾಗೂ ಟಿ20 ನಾಯಕತ್ವಕ್ಕೆ ದಿಢೀರ್ ರಾಜಿನಾಮೆ ನೀಡಿ ಅಚ್ಚರಿ ನೀಡಿದ್ದರು. ಧೋನಿ ರಾಜಿನಾಮೆ ಬಳಿಕ ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡರು. ಸರಿ ಸುಮಾರು 2 ವರ್ಷಗಳ ಬಳಿಕ ಧೋನಿ ದಿಢೀರ್ ರಾಜಿನಾಮೆ ನೀಡಿದ ಕಾರಣ ಬಹಿರಂಗ ಪಡಿಸಿದ್ದಾರೆ.

ತಂಡದ ನಾಯಕತ್ವ ವಹಿಸಿಕೊಳ್ಳೋ ನಾಯಕನಿಗೆ ಹೆಚ್ಚಿನ ಕಾಲಾವಕಾಶ ಬೇಕಿದೆ. ಅದರಲ್ಲೂ 2019ರ ವಿಶ್ವಕಪ್ ಟೂರ್ನಿಗೆ ಸಜ್ಜಾಗಲು ನೂತನ ನಾಯಕ ಹಾಗೂ ತಂಡಕ್ಕೆ ಸಮಯ ಅತ್ಯವಶ್ಯಕ. ಹೀಗಾಗಿ ನಾನು 2017ರಲ್ಲಿ ನಾಯಕತ್ವಕ್ಕೆ ವಿದಾಯ ಹೇಳಿದೆ ಎಂದು ಧೋನಿ ಹೇಳಿದ್ದಾರೆ.

ಅದೆಷ್ಟೇ ಬಲಿಷ್ಠ ತಂಡವನ್ನ ಆಯ್ಕೆ ಮಾಡಿದರೂ, ದಿಢೀರ್ ಆಯ್ಕೆಯಾದ ಹೊಸ ನಾಯಕ ತಂಡವನ್ನ ಮುನ್ನಡೆಸುವುದು ಕಷ್ಟ. ಹೀಗಾಗಿ ನಾನು ಸರಿಯಾದ ಸಮಯದಲ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿದೆ ಎಂದು ಧೋನಿ ಕಾರಣ ಹೇಳಿದ್ದಾರೆ.

ಧೋನಿ 199 ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದಾರೆ. ಇದರಲ್ಲಿ 110 ಗೆಲುವು ಹಾಗೂ 74 ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಇನ್ನು 72 ಟಿ20 ಪಂದ್ಯದಲ್ಲಿ ನಾಯಕತ್ವ ನಿಭಾಯಿಸಿದ ಧೋನಿ 48 ಗೆಲುವು, 28 ಸೋಲು ಅನುಭವಿಸಿದ್ದಾರೆ. ಇಷ್ಟೇ ಅಲ್ಲ ಟೆಸ್ಟ್‌ನಲ್ಲಿ 27 ಗೆಲುವು 18 ಸೋಲು ಹಾಗೂ 15 ಡ್ರಾ ಸಾಧಿಸಿದ್ದಾರೆ.