ರಾಂಚಿ[ಡಿ.02]: ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿಗೆ ತಂಡದಲ್ಲಿ ಸ್ಥಾನ ಸಿಗುತ್ತೋ.. ಇಲ್ಲವೋ ಎನ್ನುವ ಲೆಕ್ಕಚಾರದಲ್ಲಿರುವಾಗಲೇ ಧೋನಿ ಸ್ಥಳೀಯ ಟೆನಿಸ್ ಟೂರ್ನಿಯೊಂದರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಇಲ್ಲಿನ ಜೆಎಸ್’ಸಿಎ ಕಂಟ್ರಿ ಕ್ರಿಕೆಟ್ ಕ್ಲಬ್ ಟೆನಿಸ್ ಚಾಂಪಿಯನ್’ಶಿಪ್’ನ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಧೋನಿ ಹಾಗೂ ಸ್ಥಳೀಯ ಆಟಗಾರನಿದ್ದ ತಂಡ ಮತ್ತೊಂದು ಜೋಡಿ ವಿರುದ್ಧ 6-3, 6-3 ನೇರ ಸೆಟ್’ಗಳಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಧೋನಿ ಟೆನಿಸ್’ನಲ್ಲಿ ಮೊದಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

ಧೋನಿ ಟೆನಿಸ್ ಆಡುತ್ತಿರುವ ಫೋಟೋವನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಅಪ್’ಲೋಡ್ ಮಾಡಿದ್ದಾರೆ. ಹಾಗೆಯೇ ಚೆನ್ನೈ ಸೂಪರ್’ಕಿಂಗ್ಸ್ ತಂಡ ಕೂಡ ತನ್ನ ಅಧಿಕೃತ ವೆಬ್’ಸೈಟ್’ನಲ್ಲಿ ಧೋನಿ ಟೆನಿಸ್ ರಾಕೆಟ್ ಹಿಡಿದಿರುವ ಫೋಟೋವನ್ನು ಪ್ರಕಟಿಸಿದೆ. ತಮ್ಮ ಕಳಪೆ ಪ್ರದರ್ಶನದಿಂದ ಟಿ20 ತಂಡದಿಂದ ಹೊರಬಿದ್ದಿರುವ ಧೋನಿ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.