ಧೋನಿ ಕಳೆದೆರಡು ಆವೃತ್ತಿಗಳಲ್ಲಿ ಪುಣೆ ಸೂಪರ್‌'ಜೈಂಟ್ ಪರ ಆಡಿದ್ದರು. ಇದೇ ವೇಳೆ ಸಿಎಸ್‌'ಕೆ ತಂಡ ತಾರಾ ಆಟಗಾರಾದ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಗುಜರಾತ್ ತಂಡವನ್ನು ಪ್ರತಿನಿಧಿಸಿದ್ದರು. ಈ ಮೂರೂ ಆಟಗಾರರು ಸಿಎಸ್‌'ಕೆಗೆ ವಾಪಸಾಗಬೇಕು ಎನ್ನುವುದು ಅಭಿಮಾನಿಗಳ ಆಶಯವಾಗಿದೆ.
ನವದೆಹಲಿ(ಅ.25): 2018ರಲ್ಲಿ ಐಪಿಎಲ್'ಗೆ ವಾಪಸಾಗಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಕಳೆದೆರಡು ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಸೂಪರ್'ಜೈಂಟ್ ಹಾಗೂ ಗುಜರಾತ್ ಲಯನ್ಸ್ ತಂಡಗಳಲ್ಲಿ ಆಡಿದ ಆಟಗಾರರನ್ನು ಆಯ್ಕೆಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ.
ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ಫ್ರಾಂಚೈಸಿಗಳು ಒಪ್ಪಿಕೊಂಡರೆ ನಿರೀಕ್ಷೆಯಂತೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್'ಗೆ ಮರಳಲಿದ್ದಾರೆ.
‘ಒಬ್ಬ ಭಾರತೀಯ, ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎನ್ನುವ ಪ್ರಸ್ತಾಪ ಮಾಡಬೇಕೆಂದು ಚರ್ಚಿಸಿದ್ದೇವೆ. ಮುಂದಿನ ದಿನಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ’ ಎಂದು ಐಪಿಎಲ್ ಆಡಳಿತ ಮಂಡಳಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಧೋನಿ ಕಳೆದೆರಡು ಆವೃತ್ತಿಗಳಲ್ಲಿ ಪುಣೆ ಸೂಪರ್'ಜೈಂಟ್ ಪರ ಆಡಿದ್ದರು. ಇದೇ ವೇಳೆ ಸಿಎಸ್'ಕೆ ತಂಡ ತಾರಾ ಆಟಗಾರಾದ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಗುಜರಾತ್ ತಂಡವನ್ನು ಪ್ರತಿನಿಧಿಸಿದ್ದರು. ಈ ಮೂರೂ ಆಟಗಾರರು ಸಿಎಸ್'ಕೆಗೆ ವಾಪಸಾಗಬೇಕು ಎನ್ನುವುದು ಅಭಿಮಾನಿಗಳ ಆಶಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ,‘ರೈಟ್ ಟು ಮ್ಯಾಚ್ ಕಾರ್ಡ್ ಸೇರಿ ಒಂದು ತಂಡಕ್ಕೆ 3ರಿಂದ 5 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎನ್ನುವುದು ನಮ್ಮ ಪ್ರಸ್ತಾಪವಾಗಿದೆ. ಫ್ರಾಂಚೈಸಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದಿದ್ದಾರೆ. ಇದೇ ವೇಳೆ ತಂಡಗಳು ಆಟಗಾರರ ವೇತನಕ್ಕಾಗಿ ಖರ್ಚು ಮಾಡಬಹುದಾದ ಮೊತ್ತವನ್ನು ಸದ್ಯ ಇರುವ ₹60 ಕೋಟಿಯಿಂದ ₹75 ಕೋಟಿಗೆ ಏರಿಸುವ ಸಾಧ್ಯತೆಯಿದೆ.
