ಇಂಗ್ಲೆಂಡ್ ವಿರುದ್ಧದ 2ನೇ ಏಕದಿಂ ಪಂದ್ಯದಲ್ಲಿ ಎಂ ಎಸ್ ಧೋನಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ದಿಗ್ಗಜರ ಸಾಲಿಗೆ ಸೇರಿಕೊಂಡ ಎಂ ಎಸ್ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅಷ್ಟಕ್ಕೂ ಧೋನಿ ಮಾಡಿದ ಸಾಧನೆ ಏನು? ಇಲ್ಲಿದೆ ನೋಡಿ.

ಲಂಡನ್(ಜು.14): ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಎಂ ಎಸ್ ಧೋನಿ 10,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಲಾರ್ಡ್ಸ್ ಪಂದ್ಯದಲ್ಲಿ ಧೋನಿ 33 ರನ್ ಬಾರಿಸುತ್ತಿದ್ದಂತೆ, ಏಕದಿನ ಕ್ರಿಕೆಟ್‌ನಲ್ಲಿ 10ಸಾವಿರ ರನ್ ಸಿಡಿಸಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಹಾಗೂ ವಿಶ್ವದ 12ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

10ಸಾವಿರ ರನ್ ಸಿಡಿಸಿದ ಭಾರತೀಯರು

ಸಚಿನ್ ತೆಂಡೂಲ್ಕರ್18426
ಸೌರವ್ ಗಂಗೂಲಿ11221
ರಾಹುಲ್ ದ್ರಾವಿಡ್10768
ಎಂ ಎಸ್ ಧೋನಿ10004

ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ಗಳ ಪೈಕಿ 10ಸಾವಿರ ರನ್ ಪೂರೈಸಿದ ವಿಶ್ವದ 2ನೇ ಕ್ರಿಕೆಟಿಗ ಅನ್ನೋ ಹಿರಿಮೆಗೂ ಎಂ ಎಸ್ ಧೋನಿ ಪಾತ್ರರಾಗಿದ್ದಾರೆ . ಧೋನಿಗೂ ಮೊದಲು ಶ್ರೀಲಂಕಾದ ಕುಮಾರ ಸಂಗಕ್ಕಾರ ಈ ಸಾಧನೆ ಮಾಡಿದ್ದಾರೆ. 

273 ಇನ್ನಿಂಗ್ಸ್‌ಗಳಲ್ಲಿ ಎಂ ಎಸ್ ಧೋನಿ 10ಸಾವಿರ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅತೀ ಕಡಿಮೆ ಇನ್ನಿಂಗ್ಸ‌ಗಳಲ್ಲಿ 10ಸಾವಿರ ರನ್ ಸಿಡಿಸಿದ ವಿಶ್ವದ 5ನೇ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.

ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 10ಸಾವಿರ ರನ್

ಸಚಿನ್ ತೆಂಡೂಲ್ಕರ್259
ಸೌರವ್ ಗಂಗೂಲಿ263
ರಿಕಿ ಪಾಂಟಿಂಗ್266
ಜ್ಯಾಕ್ ಕಾಲಿಸ್272
ಎಂ ಎಸ್ ಧೋನಿ273

ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಸಿಡಿಸಿದ 3ನೇ ಹಿರಿಯ ಬ್ಯಾಟ್ಸ್‌ಮನ್ ಅನ್ನೋ ಸಾಧನೆಗೂ ಧೋನಿ ಪಾತ್ರರಾಗಿದ್ದಾರೆ. ಧೋನಿ ತಮ್ಮ 37ನೇ ವಯಸ್ಸಿನಲ್ಲಿ 10 ಸಾವಿರ ರನ್ ಪೂರೈಸಿದರು. ಮೊದಲ ಸ್ಥಾನದಲ್ಲಿರುವ ತಿಲಕರತ್ನೆ ದಿಲ್ಶಾನ್ 38ನೇ ವಯಸ್ಸಿನಲ್ಲಿ 10ಸಾವಿರ ರನ್ ಪೂರೈಸಿದ್ದಾರೆ.