ಹೈದರಾಬಾದ್(ಸೆ.27): ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಮೊಹಮ್ಮದ್ ಅಜರುದ್ದೀನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಚುನಾವಣೆಯಲ್ಲಿ 147-73 ಮತಗಳ ಅಂತರದಲ್ಲಿ ಅಜರುದ್ದೀನ್ ಗೆಲುವು ಸಾಧಿಸಿದ್ದಾರೆ. ಟೀಂ ಇಂಡಿಯಾದ ಯಶಸ್ವಿ ನಾಯಕನಾಗಿ ಮಿಂಚಿದ್ದ ಅಜರ್ ಇದೀಗ ಕ್ರಿಕೆಟ್ ಆಡಳಿತದಲ್ಲೂ ಸೈ ಎನಿಸಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಸಾನಿಯಾ ತಂಗಿ ಜೊತೆ ಅಜರ್ ಮಗನ ಮದುವೆ: ಪ್ಯಾರಿಸ್‌ನಲ್ಲಿ ಬ್ಯಾಚ್ಯುಲರ್ ಪಾರ್ಟಿ!

ಭಾರತ ತಂಡದ ನಾಯಕಾಗಿದ್ದ ಮೊಹಮ್ಮದ್ ಅಜರುದ್ದೀನ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಹೀಗಾಗಿ ಬಿಸಿಸಿಐ ಅಜರ್‌ಗೆ ನಿಷೇಧ ಹೇರಿತ್ತು. 2012ರಲ್ಲಿ ಅಜರ್ ಮೇಲಿನ ನಿಷೇಧವನ್ನು ಬಿಸಿಸಿಐ ತೆರವುಗೊಳಿಸಿತು. ಕಳೆದ ತಿಂಗಳು ಹೈದರಾಬಾದ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಅಜರ್, ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷಗಾದಿ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಂಡೋ-ಆಫ್ಘಾನ್ ಪಂದ್ಯ- ಅಜರುದ್ದೀನ್ ದಾಖಲೆ ಸರಿಗಟ್ಟಿದ ಕೊಹ್ಲಿ!

ಮಾಜಿ ಸೆಕ್ರೆಟರಿ ಜಾನ್ ಮನೋಜ್, 136 ಮತಗಳಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎದುರಾಳಿಯಾಗಿದ್ದ ದಲ್ಜೀತ್ ಸಿಂಗ್ ವಿರುದ್ಧ ಮನೋಜ್ ಗೆಲುವು ಸಾಧಿಸಿದ್ದಾರೆ. ಆರ್ ವಿಜಯಾನಂದ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. 

ಗೆಲುವಿನ ಬಳಿಕ ಮಾತನಾಡಿದ ಅಜರ್, ಹೈದರಾಬಾದ್ ಕ್ರಿಕೆಟ್ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.  ಅಜರ್ ಭಾರತದ ಪರ 99 ಟೆಸ್ಟ್ , 334 ಏಕದಿನ ಪಂದ್ಯ ಆಡಿದ್ದಾರೆ. ಟೆಸ್ಟ್ ಮಾದರಿಯಲ್ಲಿ 6215 ರನ್ ಹಾಗೂ ಏಕದಿನದಲ್ಲಿ 9378 ರನ್ ಸಿಡಿಸಿದ್ದಾರೆ.