ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮಿಸ್ಬಾ ಉಲ್ ಹಕ್ ಕೋಚ್?
ಪಾಕಿಸ್ತಾನ ತಂಡದ ಕೋಚ್ ಮಿತಿ ಆರ್ಥರ್‌ಗೆ ಗೇಟ್ ಪಾಸ್ ನೀಡಿರುವ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಹೊಸ ಕೋಚ್ ಹುಡುಕಾಟದಲ್ಲಿದೆ. ಈ ರೇಸ್‌ನಲ್ಲಿ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಕಾಣಿಸಿಕೊಂಡಿದ್ದು, ಹೊಸ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆ ದಟ್ಟವಾಗುತ್ತಿದೆ.
ಕರಾಚಿ(ಆ.28): ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಪಾಕಿಸ್ತಾನ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಏಕದಿನ ವಿಶ್ವಕಪ್ನಲ್ಲಿ ತಂಡ ಕಳಪೆ ಪ್ರದರ್ಶನ ತೋರಿದ ಕಾರಣ, ಮಿಕಿ ಆರ್ಥರ್‌ರನ್ನು ಕೋಚ್ ಹುದ್ದೆಯಿಂದ ವಜಾಗೊಳಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೊಸ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದ್ದು, ಕೋಚ್ ಹುದ್ದೆಗೇರಲು ಮಿಸ್ಬಾ ಮುಂಚೂಣಿಯಲ್ಲಿದ್ದಾರೆ.
ಇದನ್ನೂ ಓದಿ: ಪಾಕ್ ತಂಡಕ್ಕೆ ಮಿಸ್ಬಾ ಡಿಫೆನ್ಸ್ ಬೇಡ; ಕೊಹ್ಲಿ ನಿರ್ಭೀತತೆ ಬೇಕು: ರಮೀಝ್ ರಾಜ!
ಮುಂದಿನ ತಿಂಗಳು ಪಾಕಿಸ್ತಾನ ತಂಡ ತವರಿನಲ್ಲಿ ಶ್ರೀಲಂಕಾ ವಿರುದ್ಧ ಸರಣಿ ಆಡಲಿದ್ದು, ಆ ವೇಳೆಗೆ ಹೊಸ ಕೋಚ್ ನೇಮಕ ಮಾಡುವ ನಿರೀಕ್ಷೆ ಇದೆ. 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮಿಸ್ಬಾ, ಪಿಸಿಬಿಯ ಕ್ರಿಕೆಟ್ ಸಮಿತಿ ಸದಸ್ಯರಾಗಿದ್ದರು. ಇತ್ತೀಚೆಗಷ್ಟೇ ಸಮಿತಿಗೆ ರಾಜೀನಾಮೆ ನೀಡಿದ ಮಿಸ್ಬಾ, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.