15 ವರ್ಷದ ವೈಭವ್ ಸೂರ್ಯವಂಶಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರ ಈ ಐತಿಹಾಸಿಕ ಇನ್ನಿಂಗ್ಸ್ ಹಿಂದಿನ ಪ್ರೇರಣೆ ಯುವರಾಜ್ ಸಿಂಗ್ ಅವರ ಸಲಹೆಗಳಾಗಿವೆ ಎಂಬುದನ್ನು ವೈಭವ್ ಬಹಿರಂಗಪಡಿಸಿದ್ದಾರೆ.
ನವದೆಹಲಿ (ನ.25): 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಮಂಗಳವಾರ ದೋಹಾದಲ್ಲಿ ನಡೆದ ಪಂದ್ಯದಲ್ಲಿ ಯುಎಇ (UAE) ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 50 ಓವರ್ಗಳ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ದ್ವಿಶತಕ ಬಾರಿಸುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ: ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ, ಒಟ್ಟು 53 ಎಸೆತಗಳಲ್ಲಿ 28 ಅಮೋಘ ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಬರೋಬ್ಬರಿ 204 ರನ್ ಚಚ್ಚಿರುವ ವೈಭವ್, ಈ ಐತಿಹಾಸಿಕ ಇನ್ನಿಂಗ್ಸ್ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಈ ಸ್ಫೋಟಕ ಹಾಗೂ ದಾಖಲೆಯ ಇನ್ನಿಂಗ್ಸ್ ಹಿಂದೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಮಹತ್ವದ ಪಾತ್ರವಿದೆ. ಪಂದ್ಯದ ನಂತರ ಬಿಸಿಸಿಐ ಟಿವಿಗೆ (BCCI TV) ನೀಡಿದ ವಿಶೇಷ ಸಂದರ್ಶನದಲ್ಲಿ ವೈಭವ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ಬುಧವಾರ ಬಿಸಿಸಿಐ ಈ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಕಳಪೆ ಫಾರ್ಮ್ನಿಂದ ಚಿಂತೆಗೀಡಾಗಿದ್ದ ತಮಗೆ ತಮ್ಮ ಆರಾಧ್ಯ ದೈವ ಯುವರಾಜ್ ಸಿಂಗ್ ಹೇಗೆ ಆತ್ಮವಿಶ್ವಾಸ ತುಂಬಿದರು ಎಂಬುದನ್ನು ವೈಭವ್ ಸೂರ್ಯವಂಶಿ ವಿವರಿಸಿದ್ದಾರೆ. 20 ಎಸೆತ ಎದುರಿಸಿ ಕ್ರೀಸ್ನಲ್ಲಿ ನಿಂತರೆ ಸ್ಕೋರ್ ಬೇರೆಯದೇ ಆಗಿರುತ್ತೆ ಎಂದು ಯುವಿ ಸರ್ ಹೇಳಿದ್ದರು. ಕಳೆದ ಎರಡು ಇನ್ನಿಂಗ್ಸ್ಗಳು ಮತ್ತು ದೇಶೀಯ ಪಂದ್ಯಗಳಲ್ಲಿ ನನಗೆ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ನಾನು ತುಂಬಾ ಒತ್ತಡಕ್ಕೆ (Tension) ಒಳಗಾಗಿದ್ದೆ ಮತ್ತು ನನ್ನ ಏಕಾಗ್ರತೆಯೂ ಭಂಗವಾಗುತ್ತಿತ್ತು. 'ನನಗೇನಾಗುತ್ತಿದೆ?' ಎಂಬ ಪ್ರಶ್ನೆ ಮನಸ್ಸಿನಲ್ಲಿ ಕಾಡುತ್ತಿತ್ತು. ಆ ಸಂದರ್ಭದಲ್ಲಿ ಯುವರಾಜ್ ಸರ್ ಸುಮಾರು 30 ನಿಮಿಷಗಳ ಕಾಲ ನನ್ನೊಂದಿಗೆ ಮಾತನಾಡಿ ಅರ್ಥಮಾಡಿಸಿದರು. 'ನೀನು ಕ್ರೀಸ್ನಲ್ಲಿ ಕೇವಲ 20 ಎಸೆತಗಳ ಕಾಲ ಗಟ್ಟಿಯಾಗಿ ನಿಂತುಬಿಟ್ಟರೆ, ನಿನ್ನ ಸ್ಕೋರ್ ಬೇರೆಯದೇ ಮಟ್ಟದಲ್ಲಿರುತ್ತದೆ' ಎಂದು ಯುವರಾಜ್ ಸರ್ ಹೇಳಿದ್ದರು. ಅಲ್ಲದೆ, ನನ್ನ ಬ್ಯಾಟಿಂಗ್ ತಂತ್ರದಲ್ಲಿರುವ (Technique) ಲೋಪದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡಿದರು" ಎಂದು ವೈಭವ್ ತಿಳಿಸಿದ್ದಾರೆ.
ಯುವಿ ಸರ್ ನನ್ನ ರೋಲ್ ಮಾಡೆಲ್ (Idol). ಅವರೊಂದಿಗೆ ಮಾತನಾಡಿದ ನಂತರ, ಅವರು ಹೇಳಿದ ಪ್ರತಿಯೊಂದು ಅಂಶದತ್ತ ನಾನು ಗಮನ ಹರಿಸಿದೆ. ಬಳಿಕ ನನ್ನ ಬ್ಯಾಟಿಂಗ್ ವಿಡಿಯೋಗಳನ್ನು ಪರಿಶೀಲಿಸಿದಾಗ, ನಾನು ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎಂಬುದು ಸ್ಪಷ್ಟವಾಗಿ ಅರ್ಥವಾಯಿತು. ಯುವರಾಜ್ ಸರ್ ತಿಳಿಸಿದ್ದ ಒಂದೆರಡು ತಾಂತ್ರಿಕ ಅಂಶಗಳನ್ನು ಈ ಪಂದ್ಯದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದೆ; ಅದು ನನಗೆ ದೊಡ್ಡ ಮಟ್ಟದಲ್ಲಿ ನೆರವಾಯಿತು ಎಂದಿದ್ದಾರೆ.
ಕಳೆದ ಎರಡು ಇನ್ನಿಂಗ್ಸ್ಗಳಲ್ಲಿ ನಾನು ದೀರ್ಘ ಮಾದರಿಯ (Long format) ಆಟಕ್ಕೆ ತಕ್ಕಂತೆ ಆಡುತ್ತಿದ್ದೆ. ಇಂದೂ ಸಹ ಅದೇ ಆಲೋಚನೆಯೊಂದಿಗೆ ಮೈದಾನಕ್ಕೆ ಇಳಿದಿದ್ದೆ. ಆದರೆ, ಚೆಂಡು ನನ್ನ ಬ್ಯಾಟ್ಗೆ ಚೆನ್ನಾಗಿ ಬರಲು ಆರಂಭಿಸಿದಾಗ ದೊಡ್ಡ ಶಾಟ್ಗಳನ್ನು ಆಡಲು ಪ್ರಯತ್ನಿಸಿದೆ ಮತ್ತು ಅದಕ್ಕೆ ಅನುಗುಣವಾಗಿ ನನ್ನ ಆಟದ ಶೈಲಿಯನ್ನು ಬದಲಾಯಿಸಿಕೊಂಡೆ ಎಂದು ವೈಭವ್ ತಮ್ಮ ಇನ್ನಿಂಗ್ಸ್ ಕಟ್ಟಿದ ಬಗೆಯನ್ನು ವಿವರಿಸಿದ್ದಾರೆ.
ಯುವರಾಜ್ ಸಿಂಗ್ ಮೆಚ್ಚುಗೆಯ ಟ್ವೀಟ್
ಪಂದ್ಯದ ಬಳಿಕ ಯುವರಾಜ್ ಸಿಂಗ್ ಅವರು ತಮ್ಮ ಶಿಷ್ಯನ ಈ ಅಮೋಘ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಯುವಿ, ವೈಭವ್ ಅವರನ್ನು ಕೊಂಡಾಡಿದ್ದಾರೆ: ವಿಶೇಷ ಪ್ರತಿಭೆ ಮತ್ತು ಅದ್ಭುತ ಇನ್ನಿಂಗ್ಸ್! ಕೇವಲ 52 ಎಸೆತಗಳಲ್ಲಿ ದ್ವಿಶತಕ. ಇದು ನಿಜಕ್ಕೂ ನಿರ್ಭೀತ ಬ್ಯಾಟಿಂಗ್. ಹೀಗೆಯೇ ಕಠಿಣ ಪರಿಶ್ರಮ ಪಡುತ್ತಿರು ಮತ್ತು ಈ ಪಯಣವನ್ನು ಆನಂದಿಸು. ಇನ್ನೂ ಅತ್ಯುತ್ತಮ ಸಾಧನೆಗಳು ಬರಬೇಕಿವೆ ಎಂದು ಯುವಿ ಬರೆದುಕೊಂಡಿದ್ದಾರೆ.
















