ಐಪಿಎಲ್: RCB ಬೆಂಗಳೂರು ಪಂದ್ಯಕ್ಕೆ ಮೆಟ್ರೋದಿಂದ ಶುಭಸುದ್ದಿ..!
ಐಪಿಎಲ್ ಪಂದ್ಯಾವಳಿ ನಡೆಯಲಿರುವ ಮಾ.28, ಏ.5, ಏ.21, ಏ.24 ಮತ್ತು ಮೇ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ಈ ಹಿನ್ನಲೆಯಲ್ಲಿ ಸಂಚಾರ ಅವಧಿಯನ್ನು ನಮ್ಮ ಮೆಟ್ರೋ ವಿಸ್ತರಿಸಿದೆ.
ಬೆಂಗಳೂರು[ಮಾ.24]: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.28 ಸೇರಿದಂತೆ ನಿಗದಿತ ದಿನಗಳಂದು ನಡೆಯಲಿರುವ ಇಂಡಿಯನ್ ಪ್ರಿಮೀಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಮೆಟ್ರೋ ರೈಲು ವಾಣಿಜ್ಯ ಸಂಚಾರದ ಅವಧಿಯನ್ನು ತಡರಾತ್ರಿ 12.30ರಿಂದ 1ರವರೆಗೆ ವಿಸ್ತರಿಸಿರುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.
ಐಪಿಎಲ್ ಪಂದ್ಯಾವಳಿ ನಡೆಯಲಿರುವ ಮಾ.28, ಏ.5, ಏ.21, ಏ.24 ಮತ್ತು ಮೇ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮವು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ, ಮೈಸೂರು ರಸ್ತೆ, ನಾಗಸಂದ್ರ ಹಾಗೂ ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳಿಂದ ಕ್ರಮವಾಗಿ ವಾಣಿಜ್ಯ ಸಂಚಾರ ಸೇವೆಯನ್ನು ತಡರಾತ್ರಿ 12.30ರವರೆಗೆ ವಿಸ್ತರಿಸಿದೆ. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಕೊನೆಯ ವಾಣಿಜ್ಯ ಸಂಚಾರವು ತಡರಾತ್ರಿ 1ರವರೆಗೆ ಹಸಿರು ಮತ್ತು ನೇರಳೆ ಮಾರ್ಗದ ನಾಲ್ಕು ದಿಕ್ಕುಗಳಿಗೆ ಲಭ್ಯವಿರಲಿದೆ.
IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!
ಟಿಕೆಟ್ ವ್ಯವಸ್ಥೆ: ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣವನ್ನು ತಲುಪಲು ಮತ್ತು ಹಿಂತಿರುಗಲು 50 ನೀಡಿ ಪ್ರಯಾಣದ ಕಾಗದದ ಟಿಕೆಟುಗಳನ್ನು ಖರೀದಿಸಬಹುದು. ಐಪಿಎಲ್ ಪಂದ್ಯಾವಳಿ ನಡೆಯುವ ದಿನಗಳಂದು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಕಾಗದದ ಟಿಕೆಟು ಲಭ್ಯವಿರುತ್ತದೆ. ಪಂದ್ಯಾವಳಿ ನಂತರ ರಾತ್ರಿ 10ರಿಂದ ವಿಸ್ತರಿಸಲಾದ ಕಾಲಾವಧಿಯವರೆಗೆ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಹಿಂದಿರುಗಲು ಈ ಕಾಗದ ಟಿಕೆಟ್‌ಗಳನ್ನು ಬಳಸಬಹುದು. ಪಂದ್ಯಾವಳಿ ಇರುವ ದಿನಗಳಲ್ಲಿ ಟೋಕನ್‌ಗಳನ್ನು ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 10ರ ನಂತರ ಮಾರಾಟ ಮಾಡುವುದಿಲ್ಲ ಎಂದು ಮೆಟ್ರೋ ನಿಗಮ ತಿಳಿಸಿದೆ.
ಐಪಿಎಲ್ 2019: ಸಂಪೂರ್ಣ ವೇಳಾಪಟ್ಟಿ ಬಿಡುಗಡೆ!
ಏ.7ರಂದು ಸಂಜೆ ನಡೆಯಲಿರುವ ಐಪಿಎಲ್ ಪಂದ್ಯಾವಳಿಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಎಲ್ಲಾ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕಾಗದದ ಟಿಕೆಟ್‌ಗಳನ್ನು ಖರೀದಿಸ ಬಹುದು. ಕಬ್ಬನ್‌ಪಾಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 7ರ ನಂತರ ಅದೇ ಕಾಗದದ ಟಿಕೆಟ್ ಅನ್ನು ಉಪಯೋಗಿಸಬಹುದು. ಈ ದಿನದಂದು ಸಂಜೆ 7ರ ಬಳಿಕ ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣದಿಂದ ಟೋಕನ್‌ಗಳ ವಿತರಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸೇಠ್ ತಿಳಿಸಿದ್ದಾರೆ.