ಮೆಲ್ಬರ್ನ್[ಡಿ.26]: ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡ ಕನ್ನಡಿಗ ಮಯಾಂಕ್ ಅಗರ್’ವಾಲ್ 76 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. 

ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ ಪಡೆಯನ್ನು ಆತ್ಮವಿಶ್ವಾಸದಿಂದಲೇ ಎದುರಿಸಿದ ಮಯಾಂಕ್ ಶತಕದತ್ತ ಮುನ್ನುಗ್ಗುತ್ತಿದ್ದರು. ಈ ವೇಳೆ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್’ನಲ್ಲಿ ಟಿಮ್ ಪೈನೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಆಕರ್ಷಕ ಡ್ರೈವ್ ಹಾಗೂ ಕಲಾತ್ಮಕ ಬ್ಯಾಟಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಮಯಾಂಕ್ ಇನ್ನಿಂಗ್ಸ್’ನಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಕೂಡಾ ಸೇರಿತ್ತು. 

ಮುರುಳಿ ವಿಜಯ್-ಕೆ.ಎಲ್ ರಾಹುಲ್ ಸ್ಥಾನದಲ್ಲಿ ಆಡಲಿಳಿದ ಮಯಾಂಕ್ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸುವ ಮೂಲಕ ಭಾರತ ಪರ ಆರಂಭಿಕನಾಗಿ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ 7ನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಮಯಾಂಕ್ ಪಾತ್ರರಾಗಿದ್ದಾರೆ. 

ಇದೀಗ ಭಾರತ 64 ಓವರ್ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 159 ರನ್ ಬಾರಿಸಿದ್ದು, ಪೂಜಾರ 44 ಹಾಗೂ ವಿರಾಟ್ ಕೊಹ್ಲಿ 23 ರನ್ ಬಾರಿಸಿದ್ದಾರೆ.