ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಮೂಲದ ಪರ್ವೇಜ್ ರಸೂಲ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು.

ಜಮ್ಮು(ಮಾ.02): ಟೀಂ ಇಂಡಿಯಾ ಮಾಜಿ ನಾಯಕ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹೇಳುವಾಗ ಸಾಕಷ್ಟು ಬಬೂಲ್ ಗಮ್ ಜಗಿಯುವುದನ್ನು ನೋಡಿದ್ದೇನೆ. ಆಗ ತೆಪ್ಪಗಿದ್ದ ಮಾಧ್ಯಮಗಳು, ತನ್ನ ಮಗ ಪಾದಾರ್ಪಣಾ ಪಂದ್ಯದಲ್ಲಿ ಬಬೂಲ್ ಗಮ್ ಜಗಿದಿದ್ದನ್ನು ಮಹಾಪ್ರಮಾದ ಎಂಬತೆ ಬಿಂಬಿಸಿವೆ. ಈ ರೀತಿ ಮಾಧ್ಯಮಗಳು ದ್ವಂದ್ವ ನಿಲುವು ತಳೆಯುವುದೇಕೆ ಎಂದು ಹರಿಹಾಯ್ದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಮೂಲದ ಪರ್ವೇಜ್ ರಸೂಲ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದ ಉದ್ಘಾಟನೆ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡುವ ವೇಳೆ ಪರ್ವೇಜ್ ರಸೂಲ್ ಚುಯಿಂಗ್ ಗಮ್ ಜಗಿಯುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆಪ್'ಸ್ಪಿನ್ನರ್ ರಸೂಲ್ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಸೂಲ್ ತಂದೆ ಗುಲಾಮ್ ರಸೂಲ್, ಕೆಲ ವರ್ಷಗಳ ಹಿಂದೆ ಮಾಜಿ ನಾಯಕ ಸೌರವ್ ಗಂಗೂಲಿ ಜನ ಗಣ ಮನ ಹಾಡುವಾಗ ಚುಯಿಂಗ್ ಗಮ್ ಜಗಿಯುವುದನ್ನು ನೋಡಿದ್ದೇನೆ. ಆಗ ಯಾವ ಮಾಧ್ಯಮವೂ ಗಂಗೂಲಿ ಬಗ್ಗೆ ಚಕಾರವೆತ್ತಿಲ್ಲ. ಆದರೆ ರಸೂಲ್ ಅವರನ್ನು ಮಾಧ್ಯಮಗಳು ಟಾರ್ಗೇಟ್ ಮಾಡಿವೆ ಎಂದು ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ.

ತಮ್ಮ ಮಗ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಒಪ್ಪಿಕೊಂಡಿರುವ ಗುಲಾಮ್, ಕ್ರಿಕೆಟಿಗರಿಗೆ ಇದು ಸಾಮಾನ್ಯವಾಗಿದೆ. ಸಾಕಷ್ಟು ಆಟಗಾರರು ಚಿವಿಂಗ್ ಗಮ್ ಮೆಲ್ಲುತ್ತಾರೆ, ಇದರಲ್ಲಿ ತಮ್ಮ ಮಗನೂ ಹೊರತಲ್ಲ. ಆದರೆ ರಾಷ್ಟ್ರಗೀತೆ ಹಾಡುವಾಗ ಬಾಯಿ ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ನಾನು ನನ್ನ ಮಗನಿಗೆ ಈ ರೀತಿಯ ತಪ್ಪೆಸಗಬೇಡ ಮತ್ತು ದೇಶಕ್ಕೆ ಗೌರವ ಸೂಚಿಸಬೇಕು ಎಂದು ಈಗಾಗಲೇ ಹೇಳಿದ್ದೇನೆ ಎಂದಿದ್ದಾರೆ.