ಪುರುಷರ 60ಕೆ.ಜಿ ಲೈಟ್‌'ವೇಟ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶಿವ ಥಾಪ 5-0 ಅಂಕಗಳಿಂದ ಆಲ್ ಇಂಡಿಯಾ ಪೊಲೀಸ್ ತಂಡದ ಅಶೋಕ್ ಅವರನ್ನು ಮಣಿಸಿದರು.

ಗುವಾಹತಿ(ಡಿ.11): ಭಾರತದ ಸ್ಟಾರ್ ಬಾಕ್ಸರ್‌'ಗಳಾದ ಶಿವ ಥಾಪ, ಮನೋಜ್ ಕುಮಾರ್ ಮತ್ತು ದೇವೇಂದ್ರೊ ಸಿಂಗ್ ರಾಷ್ಟ್ರೀಯ ಹಿರಿಯ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಪಡೆದು ಸೆಮಿಫೈನಲ್ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.

ಇಲ್ಲಿನ ಬಾಕ್ಸಿಂಗ್ ಅಂಕಣದಲ್ಲಿ ನಡೆದ ಪುರುಷರ 60ಕೆ.ಜಿ ಲೈಟ್‌'ವೇಟ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶಿವ ಥಾಪ 5-0 ಅಂಕಗಳಿಂದ ಆಲ್ ಇಂಡಿಯಾ ಪೊಲೀಸ್ ತಂಡದ ಅಶೋಕ್ ಅವರನ್ನು ಮಣಿಸಿದರು. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಶಿವ ಥಾಪ, ಎದುರಾಳಿ ಅಶೋಕ್ ವಿರುದ್ಧ ಉತ್ತಮ ಪಂಚ್‌'ಗಳನ್ನು ಮಾಡುವ ಮೂಲಕ ಅಂಕಗಳಿಕೆಯಲ್ಲಿ ಪಾರಮ್ಯ ಮೆರೆದರು. ಅಲ್ಲದೇ ಅಶೋಕ್‌'ಗೆ ಯಾವ ಹಂತದಲ್ಲಿಯೂ ಅಂಕ ಗಳಿಸಲು ಶಿವ ಥಾಪ ಅವಕಾಶ ಕೊಡಲಿಲ್ಲ.

ಇನ್ನುಳಿದಂತೆ ಕಾಮನ್‌ವೆಲ್ತ್ ಕೂಟದ ಚಿನ್ನದ ಪದಕ ವಿಜೇತ ಬಾಕ್ಸರ್ ಮನೋಜ್ ಕುಮಾರ್ 69 ಕೆಜಿ ವಿಭಾಗದಲ್ಲಿ 4-1 ಅಂಕಗಳಿಂದ ಜಮ್ಮು ಕಾಶ್ಮೀರದ ಆಶೀಶ್ ಎದುರು ಜಯ ಸಾಧಿಸಿದರು.

ಮತ್ತೊಂದು ಪಂದ್ಯದಲ್ಲಿ ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌'ಶಿಪ್‌ನ ಬೆಳ್ಳಿ ಪದಕ ವಿಜೇತ ಎಲ್. ದೇವೇಂದ್ರೊ ಸಿಂಗ್ 52 ಕೆಜಿ ವಿಭಾಗದಲ್ಲಿ 3-2 ಅಂಕಗಳಿಂದ ಹರಿಯಾಣದ ನೀರಜ್ ವಿರುದ್ಧ ಗೆಲುವು ಸಾಧಿಸಿ ಉಪಾಂತ್ಯ ಪ್ರವೇಶಿಸಿದರು.