ಮುಂಬೈ(ಮೇ.11): ತಂಡದ ಕಳಪೆ ಪ್ರದರ್ಶನಕ್ಕೆ ಕೋಚ್‌ಗಳನ್ನು ಹೊಣೆ ಮಾಡುವ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ತಂಡ ಉತ್ತಮ ಪ್ರದರ್ಶನ ತೋರಿದಾಗ ಕೋಚ್‌ಗಳಿಗೆ ಪ್ರಶಂಸೆಯಷ್ಟೇ ಸಿಗಲಿದೆ ಹೊರತು ಬಹುಮಾನ ಸಿಗುವುದು ಅಪರೂಪ. 

ಇದೇ ಮೊದಲ ಬಾರಿಗೆ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) ಎಲ್ಲಾ ವಯೋಮಿತಿಯ ತಂಡಗಳ ಕೋಚ್‌ಗಳಿಗೆ ಬೋನಸ್‌ ನೀಡುವುದಾಗಿ ಘೋಷಿಸಿದೆ. ರಣಜಿ ಟ್ರೋಫಿಯ ಅತ್ಯಂತ ಯಶಸ್ವಿ ತಂಡ ಮುಂಬೈ, ಮುಂದಿನ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದರೆ ಕೋಚ್‌ಗೆ 12 ಲಕ್ಷ ರುಪಾಯಿ ಬೋನಸ್‌ ನೀಡುವುದಾಗಿ ಘೋಷಿಸಿದೆ. ತಂಡ ಒಂದೊಮ್ಮೆ ರನ್ನರ್‌-ಅಪ್‌ ಆದರೆ 6 ಲಕ್ಷ ರುಪಾಯಿ ಬೋನಸ್‌ ಸಿಗಲಿದೆ. ಕೋಚ್‌ ಹುದ್ದೆಗೆ ಹೊಸದಾಗಿ ಅರ್ಜಿ ಆಹ್ವಾನಿಸಿರುವ ಎಂಸಿಎ, ವರ್ಷಕ್ಕೆ 24 ಲಕ್ಷ ರುಪಾಯಿ ವೇತನ ನೀಡುವುದಾಗಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಅಂಡರ್‌-23 ತಂಡ ಸಿ.ಕೆ.ನಾಯ್ಡು ಟ್ರೋಫಿ ಗೆದ್ದರೆ ಕೋಚ್‌ಗೆ 7.5 ಲಕ್ಷ, ರನ್ನರ್‌-ಅಪ್‌ ಆದರೆ 3.5 ಲಕ್ಷ ಬೋನಸ್‌ ಸಿಗಲಿದೆ. ಕಿರಿಯರ ತಂಡದ ಕೋಚ್‌ಗೆ ವರ್ಷಕ್ಕೆ 15 ಲಕ್ಷ ಸಂಭಾವನೆ ನೀಡುವುದಾಗಿ ಎಂಸಿಎ ಘೋಷಿಸಿದೆ.