ಇಂದು ನಡೆದ ಸೆಮಿಫೈನಲ್‌'ನಲ್ಲಿ ಜಪಾನ್ ಸುಬಾಸಾ ಕೌಮುರಾ ವಿರುದ್ಧ 5-0 ಅಂತರದಿಂದ ಜಯ ಗಳಿಸುವ ಮೂಲಕ ಫೈನಲ್‌'ಗೇರಿದ ಮೇರಿ, 48 ಕೆಜಿ ವಿಭಾಗದಲ್ಲಿ ಚೊಚ್ಚಲ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ವಿಯೆಟ್ನಾಂ(ನ.07): 5 ಬಾರಿ ವಿಶ್ವ ಚಾಂಪಿಯನ್ ಎಂ.ಸಿ.ಮೇರಿ ಕೋಮ್ (48 ಕೆಜಿ) ಏಷ್ಯಾ ಬಾಕ್ಸಿಂಗ್ ಚಾಂಪಿಯನ್'ಶಿಪ್'ನಲ್ಲಿ 5ನೇ ಚಿನ್ನದ ಪದಕ ಗೆಲ್ಲಲು ಇನ್ನೊಂದೆ ಹೆಜ್ಜೆ ಬಾಕಿಯಿದೆ. ಇದೇವೇಳೆ ಸೋನಿಯಾ ಲಾಥರ್ ಕೂಡಾ ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌'ಶಿಪ್‌'ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ಸೆಮಿಫೈನಲ್‌'ನಲ್ಲಿ ಜಪಾನ್ ಸುಬಾಸಾ ಕೌಮುರಾ ವಿರುದ್ಧ 5-0 ಅಂತರದಿಂದ ಜಯ ಗಳಿಸುವ ಮೂಲಕ ಫೈನಲ್‌'ಗೇರಿದ ಮೇರಿ, 48 ಕೆಜಿ ವಿಭಾಗದಲ್ಲಿ ಚೊಚ್ಚಲ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಫೈನಲ್‌'ನಲ್ಲಿ ಮೇರಿಗೆ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ವಿರುದ್ಧ ಸೆಣಸಲಿದ್ದಾರೆ.

ಹಾಗೆಯೇ 57 ಕೆಜಿ ವಿಭಾಗದ ಸೆಮೀಸ್‌'ನಲ್ಲಿ ಉಜ್ಬೇಕಿಸ್ತಾನದ ಯೋಡ್ಗೊರೊಯ್ ಮಿರ್ಜಾವಾರನ್ನು ಮಣಿಸಿದ ಸೋನಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಇನ್ನುಳಿದ ಐವರು ಬಾಕ್ಸರ್‌'ಗಳು ಸೆಮಿಫೈನಲ್‌'ನಲ್ಲಿ ಎಡವಿ ಕಂಚಿಗೆ ತೃಪ್ತರಾಗಿದ್ದಾರೆ. ಸರಿತಾ ದೇವಿ, ಸೀಮಾ ಪೂನಿಯಾ, ಲವ್‌'ಲಿನಾ ಬೋರ್ಗೊಹೇನ್, ಪ್ರಿಯಾಂಕ ಚೌಧರಿ ನಾಲ್ಕರ ಘಟ್ಟದಲ್ಲಿ ಸೋಲುಂಡು ಕಂಚಿಗೆ ಕೊರಳೊಡ್ಡಿದ್ದರು.