27 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರಿಗೂ ಮಿಥುನ್, ಪೆವಿಲಿಯನ್ ದಾರಿ ತೋರಿಸಿದರು. ಮೊದಲೆರಡು ವಿಕೆಟ್ ಬಿದ್ದ ನಂತರ ಸ್ವಲ್ಪ ಚೇತರಿಕೆ ಕಂಡ ಮಹಾರಾಷ್ಟ್ರ 21ನೇ ಓವರ್‌ನಲ್ಲಿ ನಾಯಕ ಅಂಕಿತ್ ಭಾವ್ನೆ ವಿಕೆಟ್ ಕಳೆದುಕೊಂಡಿತು

ಪುಣೆ(ನ.03): ಮಯಾಂಕ್ ಅಗರ್‌ವಾಲ್ ಚೊಚ್ಚಲ ತ್ರಿಶಕತದ ನೆರವಿನಿಂದ ಮಹಾರಾಷ್ಟ್ರ ವಿರುದ್ಧ ‘ಎ’ ಗುಂಪಿನ ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್'ನಲ್ಲಿ ಕರ್ನಾಟಕ 628 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. 5 ವಿಕೆಟ್ ಕಳೆದುಕೊಂಡ ರಾಜ್ಯ ತಂಡ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಆತಿಥೇಯರಿಗೆ 2ನೇ ಇನ್ನಿಂಗ್ಸ್ ಆರಂಭಿಸಲು ಅವಕಾಶ ನೀಡಿತು.

3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿರುವ ಮಹಾರಾಷ್ಟ್ರ ಇನ್ನೂ 238 ರನ್ ಹಿನ್ನಡೆಯಲ್ಲಿದ್ದು, ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿದೆ.

2ನೇ ದಿನ ದ್ವಿಶತಕ ಪೂರೈಸಿ ಅಜೇಯರಾಗಿ ಉಳಿದಿದ್ದ ಮಯಾಂಕ್, 3ನೇ ದಿನವಾದ ಶುಕ್ರವಾರ ಕರುಣ್ ನಾಯರ್ ಜತೆ ಆಟ ಮುಂದುವರಿಸಿದರು. 461ಕ್ಕೆ 2ರಿಂದ ಇನ್ನಿಂಗ್ಸ್ ಮುಂದುವರಿಸಿದ ಕರ್ನಾಟಕ, 600ರ ಗಡಿ ದಾಟಿತು. ಮಯಾಂಕ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಪೂರೈಸಿದರೆ, ಕರುಣ್ ನಾಯರ್ ಆಕರ್ಷಕ 116 ರನ್ ಗಳಿಸಿ ಔಟಾದರು. ಕರ್ನಾಟಕ 628 ರನ್ ಗಳಿಸುವುದರೊಂದಿಗೆ ಮೊದಲ ಇನ್ನಿಂಗ್ಸ್ನಲ್ಲಿ 383 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು.

ಮಿಥುನ್ ಮಿಂಚು

ಭಾರೀ ಒತ್ತಡದೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಮಹಾರಾಷ್ಟ್ರಕ್ಕೆ ಅಭಿಮನ್ಯು ಮಿಥುನ್ ಕಂಟಕರಾದರು. 27 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರಿಗೂ ಮಿಥುನ್, ಪೆವಿಲಿಯನ್ ದಾರಿ ತೋರಿಸಿದರು. ಮೊದಲೆರಡು ವಿಕೆಟ್ ಬಿದ್ದ ನಂತರ ಸ್ವಲ್ಪ ಚೇತರಿಕೆ ಕಂಡ ಮಹಾರಾಷ್ಟ್ರ 21ನೇ ಓವರ್‌ನಲ್ಲಿ ನಾಯಕ ಅಂಕಿತ್ ಭಾವ್ನೆ ವಿಕೆಟ್ ಕಳೆದುಕೊಂಡಿತು. ಎನ್.ಎಸ್.ಶೇಖ್ ಕೇವಲ 3 ರನ್ ಗಳಿಸಿ ನಾಯಕನನ್ನು ಹಿಂಬಾಲಿಸಿದರು. 84 ರನ್‌ಗೆ 4 ವಿಕೆಟ್ ಪತನಗೊಂಡಿತು.

5ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡಿರುವ ರುತುರಾಜ್ ಹಾಗೂ ರಾಹುಲ್ ತ್ರಿಪಾಠಿ ದಿನದಾಟದ ಅಂತಿಮ ಎಸೆತದ ವರೆಗೂ ವಿಕೆಟ್ ಬೀಳದಂತೆ ಎಚ್ಚರ ವಹಿಸಿದರು. ತಂಡ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಬೇಕಿದ್ದರೆ, 4ನೇ ಹಾಗೂ ಕೊನೆ ದಿನವಾದ ಶನಿವಾರ ಈ ಇಬ್ಬರು ಹೋರಾಟ ನಡೆಸಬೇಕಿದೆ.

ಸ್ಕೋರ್:

ಕರ್ನಾಟಕ 628/5 ಡಿಕ್ಲೇರ್ಡ್. (ಮಯಾಂಕ್ ಅಜೇಯ 304, ಕರುಣ್ 116, ಚಿರಾಗ್ 3-147)

ಮಹಾರಾಷ್ಟ್ರ 135/4 (ರುತುರಾಜ್ 61*, ತ್ರಿಪಾಠಿ 33*, ಮಿಥುನ್ 2-32) ಹಾಗೂ 245,