Asianet Suvarna News Asianet Suvarna News

ನಡೆಯುತ್ತಾ ಓಡುತ್ತಾ ನಾಡು ಸುತ್ತುವ ಮ್ಯಾರಥಾನ್ ರನ್ನರ್!

ಕೆಲವರು ಎಷ್ಟೇ ಸಾಧನೆ ಮಾಡಿದರೂ  ತೆರೆಮರೆಯಲ್ಲೇ ಉಳಿಯುತ್ತಾರೆ ಅನ್ನುವುದಕ್ಕೆ ಈ ಹುಡುಗ ಸಾಕ್ಷಿ. ಈ ಹುಡುಗನ ಮ್ಯಾರಥಾನ್ ಸಾಧನೆಗೆ 18 ಗಿನ್ನಿಸ್ ದಾಖಲೆಗಳೇ ಪುರಾವೆ.ಇವರ ಹೆಸರು ರಕ್ಷಿತ್ ಶೆಟ್ಟಿ. ಊರು ಮಂಗಳೂರಿನ ಗುರುಪುರದ ಬೆಣ್ಣು.

Marathon runner rakshith shetty sets 18 Guinness world record
Author
Bangalore, First Published Oct 21, 2019, 3:56 PM IST
  • Facebook
  • Twitter
  • Whatsapp

ಬಾಲ್ಯದಿಂದಲೂ ಕ್ರೀಡೆ ಎಂದರೆ ಇವರಿಗೆ ಪ್ರಾಣ. ತಾನು ಓಟಗಾರನಾಗಬೇಕು ಎಂದು ಆಸೆ ಪಟ್ಟರು. ಆದರೆ, ಸೂಕ್ತವಾದ ಮಾರ್ಗದರ್ಶನ ಸಿಗಲಿಲ್ಲ. ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದ್ದ ರಕ್ಷಿತ್‌ಗೆ ತರಬೇತುದಾರರಲ್ಲಿ ತರಬೇತಿ ಪಡೆಯಲು ಆರ್ಥಿಕ ಸಂಕಷ್ಟ ಬಿಡಲಿಲ್ಲ. ಆದರೆ ರಕ್ಷಿತ್ ಛಲ ಬಿಡಲಿಲ್ಲ.

ತಾನೇ ಓಟ ಶುರು ಮಾಡಿದರು. ದೇಶ ವಿದೇಶಗಳಲ್ಲಿ ನಡೆಯುತ್ತಿದ್ದ ಮ್ಯಾರಥಾನ್ಗಳನ್ನು ವೀಕ್ಷಿಸಿದರು. ಪ್ರಸಿದ್ಧ ಮ್ಯಾರಥಾನ್ ಓಟಗಾರರನ್ನು ಗಮನಿಸಿದರು. ಓಡಲು ಶುರುಮಾಡಿದರು. ಆರಂಭದಲ್ಲಿ ಮನೆಯಿಂದ ಬಸ್ ನಿಲ್ದಾಣದವರೆಗೂ ಸುಮಾರು ಒಂದೂವರೆ ಕಿ.ಮೀ ಓಡಲು ಆರಂಭಿಸಿದರು. ಬಳಿಕ ಸಮೀಪದ ಬೀಚ್‌ನಲ್ಲಿ ಓಡಿ ಅಭ್ಯಸಿಸಿದರು. ದಿನಕ್ಕೆ ಸುಮಾರು ಒಂದು ಗಂಟೆಗಳ ಕಾಲ ನಿರಂತರ ಅಭ್ಯಾಸ ಮಾಡುತ್ತಿದ್ದರು. ಪದವಿ ಮುಗಿದ ಬಳಿಕ ಮುಂಬೈಗೆ ಕೆಲಸ ಅರಸಿ ಹೋದರು.

ಅಲ್ಲಿನ ಮೈದಾನವೊಂದರಲ್ಲಿ ನಿತ್ಯ ಒಂದು ತಾಸು ಅಭ್ಯಾಸ ಮಾಡತೊಡಗಿದರು. ಗುರುಗಳಿಲ್ಲದೆ, ತರಬೇತುದಾರರಿಲ್ಲದೆಯೂ ಒಂದು ಹಂತಕ್ಕೆ ತಾನು ಮ್ಯಾರಥಾನ್ ಓಡಬಲ್ಲೆ ಅನ್ನಿಸಿದಾಗ ಎದುರಾದದ್ದು ಸ್ಟ್ಯಾಂಡರ್ಡ್ ಪಾಯಿಂಟ್ ಮ್ಯಾರಥಾನ್. 2008ರಲ್ಲಿ ಮುಂಬೈನಲ್ಲಿ ನಡೆದ ಆ ಮ್ಯಾರಥಾನ್ ಇವರ ವೃತ್ತಿ ಜೀವನದ ಆರಂಭದ ಮ್ಯಾರಥಾನ್. ಅಲ್ಲಿಂದ ಶುರುವಾಯಿತು ಇವರ ಯಶೋಗಾಥೆ.

ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಉದ್ಯಾನವನ, ರಸ್ತೆಗಳಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಿದ್ದರಿಂದ ಬೆಳಗ್ಗೆ ಆರು ಗಂಟೆಗೆ ಸಂಚಾರ
ದಟ್ಟಣೆ ಹೆಚ್ಚುವ ಮೊದಲೇ ದಿನ ಬಿಟ್ಟು ದಿನ ಅಭ್ಯಾಸ ಮಾಡುತ್ತೇನೆ. ಈವೆಂಟ್‌ಗಳು ಇರುವ ಸಂದರ್ಭದಲ್ಲಿ ಎರಡು ವಾರಕ್ಕೂ ಮೊದಲು ದಿನನಿತ್ಯ ಎರಡು ತಾಸು ಅಭ್ಯಾಸ ಮಾಡುತ್ತೇನೆ. ಇಷ್ಟೇ ಅಲ್ಲದೆ ಯಾವುದೇ ಸ್ಥಳಕ್ಕೆ ಹೋಗಬೇಕಾದರೂ ಯಾವುದೇ ವಾಹನಗಳನ್ನು ಆಶ್ರಯಿಸದೇ ಓಡೋದು ಹಾಗೂ ನಡೆದುಕೊಂಡು ಹೋಗುತ್ತೇನೆ. ಅದು ಕೂಡ ಅಭ್ಯಾಸಕ್ಕೆ ನೆರವಾಗುತ್ತಿದೆ. - ರಕ್ಷಿತ್

ಮ್ಯಾರಥಾನ್ ಓಡುವಾಗ ಇವರು ವಿಶಿಷ್ಟ ವಸ್ತ್ರ ಧರಿಸುತ್ತಾರೆ. ೨೦೧೪ರಲ್ಲಿ ಮೈಸೂರಲ್ಲಿ ನಡೆದ 10ಕೆ ಸ್ಪರ್ಧೆಯಲ್ಲಿ ಪ್ರಾಣಿಗಳ ವಸ್ತ್ರಧರಿಸಿ ಓಡಿ 2ನೇ ಸ್ಥಾನ ಪಡೆದರು. 2015ರಲ್ಲಿ ಲವ್ ಹಾರ್ಟ್ ವಸ್ತ್ರ ಧರಿಸಿ 12 ಕಿ.ಮೀ ಓಡಿ ಎಲ್ಲರ ಗಮನ ಸೆಳೆದು ದಾಖಲೆ ಸಹ ನಿರ್ಮಿಸಿದರು. ಅದೇ ವರ್ಷ ಬೆಂಗಳೂರಲ್ಲಿ ನಡೆದ ಮಿಡ್‌ನೈಟ್ ಹಾಗೂ ಹಾಫ್ ಮ್ಯಾರಥಾನ್‌ನಲ್ಲಿ ಸಂಗೀತ
ಪರಿಕರ ಮತ್ತು ಪ್ಲೇಯಿಂಗ್ ಕಾರ್ಡ್, ಮೈಸೂರಿನಲ್ಲಿ ನಡೆದ ಹಾಫ್ ಮ್ಯಾರಥಾನ್‌ನಲ್ಲಿ ಅಳತೆ ಟೇಪ್, 2016ರಲ್ಲಿ ಬೆಂಗಳೂರಿನ ನಿರ್ಭಯಾ ಮಿಡ್‌ನೈಟ್ ಮ್ಯಾರಥಾನ್‌ನಲ್ಲಿ ವೂಪಿ ಕುಶನ್ ಹಾಗೂ ಫಾಸ್ಟ್‌ಫುಡ್ ಐಟಂಗಳು ಹೀಗೆ 2017, 2018ರಲ್ಲಿ ಸರ್ಲ್ವಾ ಕಮೀಜ್, ಬೀಚ್ ಚಪ್ಪಲಿ, ಬಾಕ್ಸರ್, ಸ್ಕೌಟ್ ಯೂನಿಫಾರ್ಮ್, ಸನ್ಯಾಸಿ, ಸಸ್ಯ ಹಾಗೂ ಟೆಲಿಫೋನ್ ವೇಷ ಧರಿಸಿ ಸ್ಪರ್ಧಿಸುವ ಮೂಲಕ ಸುಮಾರು 18 ಗಿನ್ನಿಸ್ ದಾಖಲೆಗಳಿಗೆ ಭಾಜನರಾದರು ಕರಾವಳಿ ಕುವರ ರಕ್ಷಿತ್.

ಫಿಟ್‌ನೆಸ್ ಗುಟ್ಟು

ಉತ್ತಮ ಮ್ಯಾರಥಾನ್ ಪಟು ಆಗಬೇಕೆಂದು ಹಲವಾರು ವರ್ಷಗಳಿಂದ ತಮಗೆ ಪ್ರಿಯವಾದ ಮಾಂಸಾಹಾರ ಹಾಗೂ ಎಣ್ಣೆಯಲ್ಲಿ ಬೇಯಿಸಿದ ಪದಾರ್ಥಗಳನ್ನು ತ್ಯಜಿಸಿದ್ದಾರೆ. ಫಿಟ್‌ನೆಸ್‌ಗಾಗಿ ಡ್ರೈಪ್ರೂಟ್ಸ್, ಹಣ್ಣಿನ ರಸ, ಮನೆಯ ಊಟವನ್ನು ಸೇವಿಸುತ್ತಿದ್ದೇನೆ. ಧೂಮಪಾನ, ಮದ್ಯಪಾನ ಮಾಡಲ್ಲ ಎಂದು ಹೇಳುತ್ತಾರೆ ರಕ್ಷಿತ್ ಶೆಟ್ಟಿ. ರಕ್ಷಿತ್ ಈವರೆಗೂ ಯಾವುದೇ ಜಿಮ್‌ನಲ್ಲಿ ಯಾವುದೇ ವರ್ಕೌಟ್ ಮಾಡಿಲ್ಲ. ಅಲ್ಲದೆ, ಇವರು ಯಾವುದೇ ಸ್ಥಳಗಳಿಗೆ ಹೋಗಬೇಕಾದರೆ ಎಲ್ಲದಕ್ಕೂ ವಾಕಿಂಗ್ ಹಾಗೂ ಜಾಗಿಂಗ್ ಮಾಡಿಕೊಂಡು ಹೋಗುತ್ತಾರೆ. ಇದೇ ಅವರ ಫಿಟ್‌ನೆಸ್ ಗುಟ್ಟು.

ಖಾಸಗಿ ಶಾಲೆಯಲ್ಲಿ ತರಬೇತುದಾರ

ಪ್ರಸ್ತುತ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ತರಬೇತುದಾರರಾಗಿರುವ ರಕ್ಷಿತ್‌ಗೆ ಯಾವುದೇ ಸರ್ಕಾರವಾಗಲಿ, ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಲಿಲ್ಲ. ಕೆಲವು ಮ್ಯಾರಥಾನ್‌ಗೆ ನಾನೇ ಖರ್ಚು ಭರಿಸಿಕೊಳ್ಳುತ್ತಿದ್ದೆ. ಬಳಿಕ ನನ್ನ ಸ್ನೇಹಿತರ ಸಹಾಯದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎನ್ನುವ ರಕ್ಷಿತ್ ಬಿಕಾಂ ಪದವೀಧರ. ಅವರಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ. ಅವರನ್ನು ಬೆನ್ನು ತಟ್ಟುವ ಮನಸ್ಸಿದ್ದರೆ ಒಂದು ಫೋನ್ ಮಾಡಿ. ದೂ: 9663421756, 789385393

ಪ್ರಮುಖ ದಾಖಲೆಗಳು

ಪ್ರಮುಖ ದಾಖಲೆಗಳು 21ಕಿ.ಮೀ ದೂರವನ್ನು 1 ಗಂಟೆ 33 ನಿಮಿಷ 13 ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ ಯುನೈಟೆಡ್ ಕಿಂಗ್‌ಡಂನಲ್ಲಿ ಸ್ಪರ್ಧಿಯೊಬ್ಬರು ನಿರ್ಮಿಸಿದ್ದ ದಾಖಲೆಯನ್ನು ಮೀರಿಸಿದ್ದಾರೆ. ಮೈಸೂರಿನಲ್ಲಿ ನಡೆದಿದ್ದ ಹಾಫ್ ಮ್ಯಾರಥಾನ್‌ನಲ್ಲಿ ಪಾದ್ರಿ ವಸ್ತ್ರ ಧರಿಸಿ ಓಡಿದ್ದ ರಕ್ಷಿತ್ 1 ಗಂಟೆ 34 ನಿಮಿಷ್ 55 ಸೆಕೆಂಡ್‌ನಲ್ಲಿ ಓಟ ಪೂರ್ಣಗೊಳಿಸಿ ಮತ್ತೊಂದು ಗಿನ್ನಿಸ್ ದಾಖಲೆ ಮಾಡಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಮರದ ವೇಷ ಹಾಕಿ ಸ್ಪರ್ಧಿಸಿ 1 ಗಂಟೆ 28 ನಿಮಿಷ 8 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ವಿಶ್ವ ದಾಖಲೆ ಬರೆದರು. 2015ರ ಬೆಂಗಳೂರಿನ ಮಿಡ್‌ನೈಟ್ ಮ್ಯಾರಥಾನ್‌ನಲ್ಲಿ ಸಂಗೀತ ಪರಿಕರದೊಂದಿಗೆ 1 ಗಂಟೆ 26 ನಿಮಿಷ 55 ಸೆಕೆಂಡ್ ಓಡಿ ದಾಖಲೆ ಮಾಡಿದ್ದರು. ಇದೇ ರೀತಿ ಹಲವು ದಾಖಲೆಗಳ್ನು
ಮಾಡಿ ರಕ್ಷಿತ್ ಶೆಟ್ಟಿ ದಾಖಲೆಗಳ ಸರ್ದಾರ ಎನಿಸಿಕೊಂಡಿದ್ದಾರೆ

Follow Us:
Download App:
  • android
  • ios