‘‘ಇದೇ ಮೊದಲ ಬಾರಿಗೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ತಂಡವನ್ನು ಆರಿಸಿದೆ. ಸ್ಟೆಫಾನಿ ಟೇಲರ್ ಹಾಗೂ ಮಿಕ್ಕವರಿಗೆ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ. ವರ್ಷದಿಂದ ವರ್ಷಕ್ಕೆ ವನಿತಾ ಕ್ರಿಕೆಟ್ ತಂಡದ ಪ್ರದರ್ಶನ ಗುಣಮಟ್ಟ ಅತ್ಯಾಕರ್ಷಕವಾಗಿದೆ’’- ಡೇವಿಡ್ ರಿಚರ್ಡ್‌'ಸನ್
ದುಬೈ(ಡಿ.14): ನ್ಯೂಜಿಲೆಂಡ್ ಮಹಿಳಾ ತಂಡದ ನಾಯಕಿ ಸುಜಿ ಬೇಟ್ಸ್ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಎನಿಸಿದ್ದು, ಈ ಋತುವಿನ ಐಸಿಸಿ ವನಿತಾ ತಂಡದಲ್ಲಿ ಭಾರತದ ಏಕೈಕ ಆಟಗಾರ್ತಿಯಾಗಿ ಸ್ಮತಿ ಮಂದಾನ ಸ್ಥಾನ ಪಡೆದಿದ್ದಾರೆ.
ಇನ್ನು ವರ್ಷದ ಮಹಿಳಾ ತಂಡದ ನಾಯಕಿಯಾಗಿ ವೆಸ್ಟ್'ಇಂಡೀಸ್'ನ ಆಲ್ರೌಂಡ್ ಆಟಗಾರ್ತಿ ಸ್ಟೆಫಾನಿ ಟೇಲರ್ ಆಯ್ಕೆಯಾಗಿದ್ದಾರೆ. ಐಸಿಸಿ ಮಹಿಳಾ ವಿಶ್ವ ಟಿ20 ಮತ್ತು ಐಸಿಸಿ ವನಿತಾ ಚಾಂಪಿಯನ್'ಶಿಪ್ ಪಂದ್ಯಾವಳಿಗಳನ್ನು ಒಳಗೊಂಡಂತೆ ಸೆಪ್ಟೆಂಬರ್ 14, 2015ರಿಂದ ಸೆಪ್ಟೆಂಬರ್ 20, 2016ರವರೆಗಿನ ಅವಧಿಯಲ್ಲಿನ ಪ್ರದರ್ಶನದ ಆಧಾರದ ಮೇಲೆ ಈ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್'ಸನ್ ತಿಳಿಸಿದ್ದಾರೆ.
‘‘ಇದೇ ಮೊದಲ ಬಾರಿಗೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ತಂಡವನ್ನು ಆರಿಸಿದೆ. ಸ್ಟೆಫಾನಿ ಟೇಲರ್ ಹಾಗೂ ಮಿಕ್ಕವರಿಗೆ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ. ವರ್ಷದಿಂದ ವರ್ಷಕ್ಕೆ ವನಿತಾ ಕ್ರಿಕೆಟ್ ತಂಡದ ಪ್ರದರ್ಶನ ಗುಣಮಟ್ಟ ಅತ್ಯಾಕರ್ಷಕವಾಗಿದೆ’’ ಎಂದು ಅವರು ಹೇಳಿದ್ದಾರೆ.
ಕ್ಲಾರೆ ಕಾನರ್ ನೇತೃತ್ವದ ಮೆಲ್ ಜೋನ್ಸ್ ಮತ್ತು ಶುಭಾಂಗಿ ಕುಲಕರ್ಣಿ ಅವರಿದ್ದ ಆಯ್ಕೆಸಮಿತಿ ಈ ತಂಡವನ್ನು ಆರಿಸಿದ್ದು, ಐಸಿಸಿ ಏಕದಿನ ಮತ್ತು ಟಿ20 ತಂಡದ ಆಟಗಾರ್ತಿ ಪ್ರಶಸ್ತಿ ಪಡೆದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಕಿವೀಸ್'ನ ಸುಜಿ ಬೇಟ್ಸ್ ಭಾಜನರಾಗಿದ್ದಾರೆ.
ಐಸಿಸಿ ವರ್ಷದ ಮಹಿಳಾ ತಂಡ ಇಂತಿದೆ
ಸುಜಿ ಬೇಟ್ಸ್ (ನ್ಯೂಜಿಲೆಂಡ್), ರಾಕೆಲ್ ಪ್ರೀಸ್ಟ್ (ನ್ಯೂಜಿಲೆಂಡ್-ವಿಕೆಟ್ಕೀಪರ್), ಸ್ಮತಿ ಮಂದಾನ (ಭಾರತ), ಸ್ಟೆಫಾನಿ ಟೇಲರ್ (ವೆಸ್ಟ್ಇಂಡೀಸ್-ನಾಯಕಿ), ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ), ಎಲಿಸಿ ಫೆರ್ರಿ (ಆಸ್ಟ್ರೇಲಿಯಾ), ಹೆದರ್ ನೈಟ್ (ಇಂಗ್ಲೆಂಡ್), ಡಿಯಾಂಡ್ರ ಡಾಟಿನ್ (ವೆಸ್ಟ್ಇಂಡೀಸ್), ಸುನೆ ಲುಸ್ (ದ.ಆಫ್ರಿಕಾ), ಅನ್ಯಾ ಶ್ರುಬ್ಸೊಲೆ (ಇಂಗ್ಲೆಂಡ್), ಲೀಗ್ ಕಾಸ್ಪರೆಕ್ (ನ್ಯೂಜಿಲೆಂಡ್), 12ನೇ ಆಟಗಾರ್ತಿ: ಕಿಮ್ ಗಾರ್ಥ್ (ಐರ್ಲೆಂಡ್).
