ಮಲೇಷ್ಯಾ ಓಪನ್: ಪ್ರಣಯ್ ಕ್ವಾರ್ಟರ್ಗೆ ಲಗ್ಗೆ
* ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎಚ್ ಎಸ್ ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶ
* ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ ಕೂಡಾ ಕ್ವಾರ್ಟರ್ ಫೈನಲ್ ಪ್ರವೇಶ
* ಕ್ವಾರ್ಟರ್‌ನಲ್ಲಿ ಪ್ರಣಯ್‌ಗೆ ಜಪಾನ್‌ನ ಕೊಡಾಯಿ ನರೋಕಾ ಎದುರಾಳಿ
ಕೌಲಾಲಂಪುರ(ಜ.13): ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್, ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ವಿಶ್ವ ನಂ.8 ಪ್ರಣಯ್ ಇಂಡೋನೇಷ್ಯಾದ ಚಿಕೋ ವಿರುದ್ಧ 21-9, 15-21, 21-16 ಗೇಮ್‌ಗಳಲ್ಲಿ ಗೆದ್ದರು.
ಕ್ವಾರ್ಟರ್‌ನಲ್ಲಿ ಪ್ರಣಯ್‌ಗೆ ವಿಶ್ವ ನಂ.7 ಜಪಾನ್‌ನ ಕೊಡಾಯಿ ನರೋಕಾ ಎದುರಾಗಲಿದ್ದಾರೆ. ವಿಶ್ವ ನಂ.5 ಸಾತ್ವಿಕ್-ಚಿರಾಗ್ ಇಂಡೋನೇಷ್ಯಾದ ಫಿಕ್ರಿ-ಬಗಾಸ್ ವಿರುದ್ಧ 21-19, 22-20 ನೇರ ಗೇಮ್‌ಗಳಲ್ಲಿ ಗೆದ್ದರು. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ ಜೋಡಿ ಸೋತು ಹೊರಬಿತ್ತು.
ಆಸ್ಪ್ರೇಲಿಯನ್ ಓಪನ್: ಜೋಕೋಗೆ ಗಾಯದ ಭೀತಿ!
ಮೆಲ್ಬರ್ನ್: ಈ ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಆಸ್ಪ್ರೇಲಿಯನ್ ಓಪನ್ ಗೆದ್ದು ರಾಫೆಲ್ ನಡಾಲ್‌ರ 22 ಪ್ರಶಸ್ತಿಗಳ ದಾಖಲೆ ಸರಿಗಟ್ಟುವ ನಿರೀಕ್ಷೆಯಲ್ಲಿರುವ ಮಾಜಿ ವಿಶ್ವ ನಂ.1 ಸರ್ಬಿಯಾದ ನೋವಾಕ್ ಜೋಕೋವಿಚ್‌ಗೆ ಗಾಯದ ಭೀತಿ ಎದುರಾಗಿದೆ.
ಸೋಲಿನಲ್ಲೂ ಭಾರತವನ್ನು ಹಿಂದಿಕ್ಕಿದ ಶ್ರೀಲಂಕಾ, ಏಕದಿನದಲ್ಲಿ ಸಿಂಹಳೀಯರಿಗೆ ಅಪಖ್ಯಾತಿ!
ಬುಧವಾರ ರಷ್ಯಾ ಟೆನಿಸಿಗ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ ಅಭ್ಯಾಸ ಪಂದ್ಯದ ವೇಳೆ ಜೋಕೋವಿಚ್ ಸ್ನಾಯು ಸೆಳೆತಕ್ಕೆ ಒಳಗಾಗಿ ಅಭ್ಯಾಸ ಮೊಟಕುಗೊಳಿಸಿದರು. 75 ನಿಮಿಷಗಳ ಕಾಲ ನಡೆಯಬೇಕಿದ್ದ ಅಭ್ಯಾಸ ಪಂದ್ಯ 30 ನಿಮಿಷಗಳಲ್ಲೇ ಮುಗಿಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೋಕೋವಿಚ್ ‘ಕಳೆದ ವಾರ ಅಡಿಲೇಡ್ ಓಪನ್ ವೇಳೆ ಸ್ನಾಯು ಸೆಳೆತದ ಸಮಸ್ಯೆ ಎದುರಾಗಿತ್ತು. ಇದೀಗ ಮತ್ತೆ ನೋವು ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಭ್ಯಾಸ ಪಂದ್ಯ ಮೊಟಕುಗೊಳಿಸಿದೆ’ ಎಂದಿದ್ದಾರೆ. ಜ.16ರಿಂದ ಆಸ್ಪ್ರೇಲಿಯನ್ ಓಪನ್ ಆರಂಭಗೊಳ್ಳಲಿದೆ.
ಟೆನಿಸ್ ತಾರೆ ಜಪಾನ್‌ನ ಒಸಾಕ 4 ತಿಂಗಳ ಗರ್ಭಿಣಿ
ಟೋಕಿಯೋ: ಜಪಾನ್‌ನ ಟೆನಿಸ್ ತಾರೆ ನವೊಮಿ ಒಸಾಕ ತಾವು 4 ತಿಂಗಳ ಗರ್ಭಿಣಿಯಾಗಿರುವುದಾಗಿ ಘೋಷಿಸಿದ್ದು, ಇದೇ ಕಾರಣಕ್ಕೆ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂಗೆ ಗೈರಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. 2019, 2021ರಲ್ಲಿ ಆಸ್ಪ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿರುವ ಒಸಾಕ ಕೆಲ ದಿನಗಳ ಹಿಂದಷ್ಟೇ ಈ ಬಾರಿ ಟೂರ್ನಿಯಲ್ಲಿ ಆಡಲ್ಲ ಎಂದಿದ್ದರು. 2024ರ ಆರಂಭದಲ್ಲೇ ಟೆನಿಸ್‌ಗೆ ಮರಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐಎನ್‌ಬಿಎಲ್ ಫೈನಲ್ಸ್: ಮುಂಬೈ, ಡೆಲ್ಲಿಗೆ ಜಯ
ಬೆಂಗಳೂರು: ಚೊಚ್ಚಲ ಆವೃತ್ತಿಯ ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್(ಐಎನ್‌ಬಿಎಲ್) ಫೈನಲ್ಸ್ ಟೂರ್ನಿ ಗುರುವಾರ ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಂಡಿತು. ಮೊದಲ ಸುತ್ತಿನಲ್ಲಿ ಡೆಲ್ಲಿ ಡ್ರಿಬ್ಲರ್ಸ್ ತಂಡ ಕೊಚ್ಚಿ ಟೈಗರ್ಸ್ ವಿರುದ್ಧ 84-78 ಅಂಕಗಳಿಂದ ಗೆದ್ದರೆ, ಮುಂಬೈ ಟೈಟಾನ್ಸ್ ತಂಡ ಚಂಡೀಗಢ ವಾರಿಯರ್ಸ್ ವಿರುದ್ಧ 79-71ರಿಂದ ಜಯಭೇರಿ ಬಾರಿಸಿತು. ಶುಕ್ರವಾರ ಡೆಲ್ಲಿ ಹಾಗೂ ಚೆನ್ನೈ ಹೀಟ್ಸ್, ಬೆಂಗಳೂರು ಕಿಂಗ್ಸ್ ಹಾಗೂ ಮುಂಬೈ ತಂಡಗಳು ಸೆಣಸಲಿವೆ.
ವಿಶ್ವ ಟಿಟಿ ಕೂಟಕ್ಕೆ ಮನಿಕಾ, ಶರತ್, ಶ್ರೀಜಾಗೆ ಅರ್ಹತೆ
ಲುಸೈಲ್(ಕತಾರ್): ಭಾರತದ ತಾರಾ ಟೇಬಲ್ ಟೆನಿಸ್ ಪಟುಗಳಾದ ಮನಿಕಾ ಬಾತ್ರಾ, ಶ್ರೀಜಾ ಅಕುಲಾ, ಶರತ್ ಕಮಲ್ ವಿಶ್ವ ಟಿಟಿ ಚಾಂಪಿಯನ್‌ಶಿಪ್(ಡಬ್ಲ್ಯುಟಿಟಿಸಿ)ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಮೂವರೂ ಮಂಗಳವಾರ ಏಷ್ಯನ್ ಡಬ್ಲ್ಯುಟಿಟಿಸಿ ಕಾಂಟಿನೆಂಟಲ್ ಸ್ಟೇಜ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು.
ಪ್ರಿ ಕ್ವಾರ್ಟರ್‌ನಲ್ಲಿ ಶ್ರೀಜಾ ಚೈನೀಸ್ ತೈಪೆಯ ಚೆನ್ ತ್ಸು ಯು ವಿರುದ್ಧ, ಮನಿಕಾ ಹಾಂಕಾಂಗ್‌ನ ಝು ಚೆಂಗ್ಯು ವಿರುದ್ಧ ಜಯಗಳಿಸಿದರು. ಶರತ್ ಇರಾನಿನ ಅಹ್ಮದಿಯನ್ ಅಮೀನ್‌ರನ್ನು ಮಣಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಮನಿಕಾ-ಜಿ.ಸತ್ಯನ್, ಪುರುಷರ ಡಬಲ್ಸ್‌ನಲ್ಲಿ ಸತ್ಯನ್-ಶರತ್ ಕೂಡಾ ಮೇ ತಿಂಗಳಲ್ಲಿ ಡರ್ಬನ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಟಿಸಿ ಫೈನಲ್ಸ್‌ಗೆ ಅರ್ಹತೆ ಪಡೆದಿದ್ದಾರೆ.