ಆರ್'ಸಿಬಿ ತಂಡವು ಈ ಬಾರಿಯ ಹರಾಜಿನಲ್ಲಿ ವೇಗಿಗಳಿಗೆ ಪ್ರಮುಖ ಆದ್ಯತೆ ನೀಡುವ ನಿರೀಕ್ಷೆಯಿದೆ.

ನವದೆಹಲಿ(ಡಿ.19): ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್‌'ನ(ಐಪಿಎಲ್) 2017ರ ಆವೃತ್ತಿಗಾಗಿ ಹರಾಜುಗೊಳ್ಳಲಿರುವ ಆಟಗಾರರ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ಸಂಸ್ಥೆಯು (ಬಿಸಿಸಿಐ) ಬಿಡುಗಡೆಗೊಳಿಸಿದೆ.

44 ವಿದೇಶಿ ಆಟಗಾರರು ಸೇರಿದಂತೆ 140 ಕ್ರಿಕೆಟಿಗರ ಹೆಸರುಗಳು ಪಟ್ಟಿಯಲ್ಲಿದೆ. ಫ್ರಾಂಚೈಸಿಗಳು ತಾವು ಈವರೆಗೆ ಹೊಂದಿದ್ದ ಕೆಲ ಆಟಗಾರರನ್ನು ತಂಡದಿಂದ ಬಿಡುಗಡೆಗೊಳಿಸಿದ್ದು ಅವರಲ್ಲಿ ಡೇಲ್ ಸ್ಟೇಯ್ನ್, ಕೆವಿನ್ ಪೀಟರ್ಸನ್, ಟ್ರೆಂಟ್ ಬೌಲ್ಟ್ ಮುಂತಾದ ದೊಡ್ಡ ಹೆಸರುಗಳೂ ಇವೆ.

ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ ಆಟಗಾರರ ಪಟ್ಟಿಯಲ್ಲಿ ಪ್ರಮುಖರಾದ ಮಿಚೆಲ್ ಜಾನ್ಸನ್ (ಕಿಂಗ್ಸ್ ಇಲೆವೆನ್ ಪಂಜಾಬ್), ಡೇಲ್ ಸ್ಟೇಯ್ನ್ (ಗುಜರಾತ್ ಲಯನ್ಸ್), ಕೆವಿನ್ ಪೀಟರ್ಸನ್ (ರೈಸಿಂಗ್ ಪುಣೆ ಸೂಪರ್ ಸ್ಟಾರ್ಸ್), ಇಯಾನ್ ಮಾರ್ಗನ್ (ಸನ್‌'ರೈಸರ್ಸ್ ಹೈದರಾಬಾದ್), ಟ್ರೆಂಟ್ ಬೌಲ್ಟ್ (ಸನ್‌'ರೈಸರ್ಸ್ ಹೈದರಾಬಾದ್), ಮಾರ್ಟಿನ್ ಗುಪ್ಟಿಲ್ (ಮುಂಬೈ ಇಂಡಿಯನ್ಸ್), ಕೋರಿ ಆ್ಯಂಡರ್ಸನ್ (ಮುಂಬೈ ಇಂಡಿಯನ್ಸ್), ಇಮ್ರಾನ್ ತಾಹಿರ್ (ಡೆಲ್ಲಿ ಡೇರ್‌'ಡೆವಿಲ್ಸ್), ಮೊರ್ನೆ ಮಾರ್ಕೆಲ್ (ಕೋಲ್ಕತಾ ನೈಟ್‌'ರೈಡರ್ಸ್) ಇದ್ದಾರೆ.

ವೇಗಿಗಳಿಗೆ ಆರ್‌ಸಿಬಿ ಮಣೆ?

ಕಳೆದ ಆವೃತ್ತಿಯಲ್ಲಿ ಫೈನಲ್‌'ವರೆಗೂ ಹೋಗಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಟಿಂಗ್ ಲೈನ್‌'ಅಪ್‌ನಲ್ಲಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಅವರಂಥ ದಿಗ್ಗಜರನ್ನು ಹೊಂದಿದ್ದರೂ ವೇಗದ ಬೌಲರ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಹಾಗಾಗಿ, ಆ ತಂಡವು ಈ ಬಾರಿಯ ಹರಾಜಿನಲ್ಲಿ ವೇಗಿಗಳಿಗೆ ಪ್ರಮುಖ ಆದ್ಯತೆ ನೀಡುವ ನಿರೀಕ್ಷೆಯಿದೆ.