All England Open: ಲಕ್ಷ್ಯ ಸೇನ್, ಪ್ರಣಯ್ ಎರಡನೇ ಸುತ್ತಿಗೆ ಲಗ್ಗೆ
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಲಕ್ಷ್ಯ ಸೇನ್, ಪ್ರಣಯ್ ಶುಭಾರಂಭ
ಕಳೆದ ವರ್ಷ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಲಕ್ಷ್ಯ ಸೆನ್
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ ಇಂದು ಅಭಿಯಾನ ಆರಂಭ
ಬರ್ಮಿಂಗ್‌ಹ್ಯಾಮ್(ಮಾ.15): ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ಗಳಾದ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್ ಶುಭಾರಂಭ ಮಾಡಿದ್ದಾರೆ. ಮಂಗಳವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಪ್ರಣಯ್, ಚೈನೀಸ್ ತೈಪೆಯ ವ್ಯಾಂಗ್ ತ್ಸು ವಿರುದ್ಧ 21-19, 22-20 ನೇರ ಗೇಮ್ಗಳಲ್ಲಿ ಗೆಲುವು ಸಾಧಿಸಿದರು. ಟೂರ್ನಿಯಲ್ಲಿ ಕಳೆದ ವರ್ಷ ಫೈನಲ್ ಪ್ರವೇಶಿಸಿದ್ದ ಲಕ್ಷ್ಯ ಸೇನ್ ಚೈನೀಸ್ ತೈಪೆಯ ಚೊವು ಟೀನ್ ಚೆನ್‌ರನ್ನು 21-18, 21-19 ಗೇಮ್ಗಳಲ್ಲಿ ಮಣಿಸಿ 2ನೇ ಸುತ್ತಿಗೇರಿದರು. ಮಹಿಳಾ ಸಿಂಗಲ್ಸ್ನಲ್ಲಿ ಪಿ.ವಿ.ಸಿಂಧು, ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿಬುಧವಾರ ಆಡಲಿದ್ದಾರೆ.
ವಿಶ್ವ ಕೂಟಕ್ಕಿಲ್ಲ ಆಯ್ಕೆ: ಕೋರ್ಟ್ ಮೆಟ್ಟಿಲೇರಿದ್ದ ಬಾಕ್ಸರ್‌ಗಳಿಗೆ ಹಿನ್ನಡೆ
ನವದೆಹಲಿ: ಮುಂಬರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆ ಮಾಡದ ಕಾರಣ ಭಾರತೀಯ ಬಾಕ್ಸಿಂಗ್ ಫೆಡರೇಷನ್ ವಿರುದ್ಧ ದೆಹಲಿ ಹೈಕೋರ್ಚ್ ಮೆಟ್ಟಿಲೇರಿದ್ದ ಮೂವರು ಬಾಕ್ಸರ್‌ಗಳಿಗೆ ಹಿನ್ನಡೆಯುಂಟಾಗಿದೆ. ಬುಧವಾರ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಪ್ರತಿಭಾ ಸಿಂಗ್, ಬಾಕ್ಸರ್ಗಳ ಆಯ್ಕೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ. ಈಗ ಆಯ್ಕೆಯಾಗಿರುವ ಬಾಕ್ಸರ್ಗಳು ಟೂರ್ನಿಯಲ್ಲಿ ಪಾಲ್ಗೊಳ್ಳಬಹುದು’ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಚಾಂಪಿಯನ್ನರಾದ ಮಂಜು ರಾಣಿ, ಶಿಕ್ಷಾ ನರ್ವಾಲ್ ಹಾಗೂ ಪೂನಮ್ ಪೂನಿಯಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಮೂವರನ್ನು ಹೊರತುಪಡಿಸಿ ಚಿನ್ನ ಗೆದ್ದ ಇನ್ನುಳಿದ ಎಲ್ಲಾ ಬಾಕ್ಸರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ತಮ್ಮನ್ನು ಕಡೆಗಣಿಸಿ ಅನ್ಯಾಯ ಮಾಡಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
ಪ್ರೊ ಲೀಗ್ ಹಾಕಿ: ಇಂದು ಭಾರತ-ಆಸ್ಪ್ರೇಲಿಯಾ ಫೈಟ್
ರೂರ್ಕೆಲಾ: 2022-23ರ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಆತಿಥೇಯ ಭಾರತ ಬುಧವಾರ ಆಸ್ಪ್ರೇಲಿಯಾ ವಿರುದ್ಧ 2ನೇ ಬಾರಿ ಸೆಣಸಾಡಲಿದೆ. ಕಳೆದ ವಾರ ರೂರ್ಕೆಲಾದ ಕ್ರೀಡಾಂಗಣದಲ್ಲೇ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಭಾರತ 5-4 ಗೋಲುಗಳಿಂದ ರೋಚಕ ಗೆಲುವು ಸಾಧಿಸಿತ್ತು. ಒಟ್ಟಾರೆ ಭಾರತ ಲೀಗ್ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 17 ಅಂಕ ಸಂಪಾದಿಸಿ ಗೋಲು ವ್ಯತ್ಯಾಸದ ಆಧಾರದಲ್ಲಿ ಸ್ಪೇನ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದೆ.
'ಏಕ್ ತೇರಾ, ಏಕ್ ಮೇರಾ..' ಅಕ್ಷಯ್ ಕುಮಾರ್ ಚಿತ್ರದ ಹಾಸ್ಯ ದೃಶ್ಯ ಮರುಸೃಷ್ಟಿಸಿದ ಅಶ್ವಿನ್-ಜಡೇಜಾ!
ಅತ್ತ ಆಸ್ಪ್ರೇಲಿಯಾ 6 ಪಂದ್ಯಗಳಲ್ಲಿ ಕೇವಲ 4 ಅಂಕ ಸಂಪಾದಿಸಿ 8ನೇ ಸ್ಥಾನದಲ್ಲೇ ಬಾಕಿಯಾಗಿದೆ. 4 ದಿನಗಳ ಅಂತರದಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 2 ಬಾರಿ ಗೆಲುವು ಸಾಧಿಸಿರುವ ಭಾರತ ತುಂಬು ವಿಶ್ವಾಸದಲ್ಲಿದ್ದು, ಮತ್ತೊಂದು ಗೆಲುವಿನೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ. ಅತ್ತ ಆಸ್ಪ್ರೇಲಿಯಾ ಟೂರ್ನಿಯಲ್ಲಿ 2ನೇ ಗೆಲುವಿಗಾಗಿ ಕಾಯುತ್ತಿದೆ.
ಸಿಂಗಾಪೂರ ಟಿಟಿ ಟೂರ್ನಿ: ಭಾರತದ ಸವಾಲು ಅಂತ್ಯ
ಸಿಂಗಾಪೂರ: ಮನಿಕಾ ಬಾತ್ರಾ ಮಹಿಳಾ ಮತ್ತು ಮಿಶ್ರ ಡಬಲ್ಸ್ನಲ್ಲಿ ಸೋಲುವುದರೊಂದಿಗೆ ಸಿಂಗಾಪೂರ ಸ್ಮಾಷ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಮನಿಕಾ-ಸತ್ಯನ್ 2-3ರಿಂದ ಜಪಾನ್ ಜೋಡಿ ವಿರುದ್ಧ ಸೋತರೆ, ಮಹಿಳಾ ಡಬಲ್ಸ್ನಲ್ಲಿ ಮನಿಕಾ-ಅರ್ಚನಾ ಕಾಮತ್ ಚೀನಾ ಜೋಡಿ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ 2-3ರಿಂದ ಪರಾಭವಗೊಂಡಿತು. ಮನಿಕಾ, ಸತ್ಯನ್, ಶರತ್ ಸಿಂಗಲ್ಸ್ನಲ್ಲಿ ಮೊದಲ ಸುತ್ತಲ್ಲೇ ಸೋತಿದ್ದರು.