ಜರ್ಮನಿಯಲ್ಲಿ ನಡೆಯಲಿರುವ ಜ್ಯೂನಿಯರ್ ವಿಶ್ವಕಪ್ ಶೂಟಿಂಗ್ ನಲ್ಲಿ ಭಾಗವಹಿಸಲಿರುವ ಪ್ರಿಯಾ ಕಣ್ಣಲ್ಲಿ ಇಂದು ಸಂತಸ ಮನೆ ಮಾಡಿದೆ. ಆದರೆ ಜರ್ಮನಿಗೆ ತೆರಳಲು ಸಾಧ್ಯವಾಗದೇ ಇದ್ದಾಗ ಕೖ ಚೆಲ್ಲಿ ಕುಳಿತ ನೋವಿನ ಕತೆ ಏನು? ಈ ಸುದ್ದಿ ಓದಿ...
ಮೀರತ್ [ಜೂ.9] : ಆಕೆ ಬಡ ಕಾರ್ಮಿಕನ ಮಗಳು, ಆದರೆ ಆಕೆ ಕಣ್ಣಲ್ಲಿ ಕನಸಿತ್ತು, ದೇಶಕ್ಕೆ ಪದಕ ಹೊತ್ತು ತರುವ ಹೆಬ್ಬಯಕೆಯೂ ಇತ್ತು. ಜರ್ಮನಿಯಲ್ಲಿ ಜೂನ್ 22ರಂದು ನಡೆಯುವ ಇಂಟರ್ ನ್ಯಾಶನಲ್ ಶೂಟಿಂಗ್ ಸ್ಫೋರ್ಟ್ಸ್ ಫೆಡರೇಷನ್ ಜ್ಯೂನಿಯರ್ ವಿಶ್ವಕಪ್ ನಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಳು. ಆಯ್ಕೆಯಾದ ಭಾರತದ 6 ವನಿತೆಯರಲ್ಲಿ ನಾಲ್ಕನೆಯವಳಾಗಿದ್ದಳು. ಆದರೆ ಸರಕಾರ ಮೊದಲ ಮೂರು ಜನರನ್ನು ಮಾತ್ರ ಪಂದ್ಯಾವಳಿಗೆ ಕಳುಹಿಸಿಕೊಡಲಿತ್ತು.
ಏನೂ ಮಾಡಲು ತಿಳಿಯದ ಯುವತಿಯ ಅಪ್ಪ ಉತ್ತರ ಪ್ರದೇಶದ ಮುಖ್ಯಮಂತ್ರಿ, ಕೇಂದ್ರ ಕ್ರೀಡಾ ಸಚಿವ ಅಂತಿಮವಾಗಿ ಪ್ರಧಾನಿಗೂ ಪತ್ರ ಬರೆದಿದ್ದರು. ವಿವಿಧ ಕಚೇರಿಗಳನ್ನು ಅಲೆದಿದ್ದರು. ಆದರೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಸೆಯನ್ನು ಕೈ ಚೆಲ್ಲಿಯೇ ಪ್ರತಿಭಾವಂತ ಯುವತಿ ಕುಳಿತುಕೊಂಡಿದ್ದರು. ಆದರೆ ಇಂದು ಮಾಧ್ಯಮಗಳ ಸಹಕಾರದಲ್ಲಿ ಆಕೆಯ ಆಸೆಗೆ ಮರುಜೀವ ಸಿಕ್ಕಿದೆ.
ಮೀರತ್ ನ ಬಡ ಕಾರ್ಮಿಕನ ಮಗಳು, ಪ್ರತಿಭಾವಂತ ಶೂಟಿಂಗ್ ಪಟು ಪ್ರಿಯಾ ಕತೆ ಇದು. ತಿಂಗಳಿಗೆ 10 ಸಾವಿರ ದುಡಿಯುವ ಪ್ರಿಯಾ ತಂದೆಗೆ ಮಗಳಿಗೆ ಹೊಸ ರೈಫಲ್ ಕೊಡಿಸಿ ಜರ್ಮನಿಗೆ ಕಳಿಸುವ ಶಕ್ತಿ ಇರಲೇ ಇಲ್ಲ. 2014 ರಿಂದ 2017ರವರೆಗೆ ಆಲ್ ಇಂಡಿಯಾ ನ್ಯಾಷನಲ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಸೇರಿದಂತೆ ಪ್ರಿಯಾ ಒಟ್ಟು 17 ಪದಕಗಳಿಗೆ ಕೊರಳೊಡ್ಡಿದ್ದವಳಿಗೆ ಭಾಗವಹಿಸುವ ಅವಕಾಶ ಮರೆಯಾಗುತ್ತ ಬಂದಿತ್ತು.
ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ನೋಡಿದ ನಂತರ ಭಾರತ ಸರಕಾರದ ಸ್ಫೋರ್ಟ್ಸ್ ಅಥಾರಟಿ ಆಫ್ ಇಂಡಿಯಾದ ಡಿಜಿ ನೀಲಂ ಕಪೂರ್ ಪ್ರಿಯಾ ನೆರವಿಗೆ ಧಾವಿಸಿದ್ದಾರೆ. ಪ್ರಿಯಾ ಜರ್ಮನಿಯ ಪ್ರವಾಸದ ಎಲ್ಲ ಖರ್ಚು-ವೆಚ್ಚಗಳನ್ನು ಸರಕಾರವೇ ಹೊರಲಿದ್ದು ಶೂಟಿಂಗ್ ಗೆ ಅಗತ್ಯವಾದ ರೖಫಲ್ ಸಹ ನೀಡಲಾಗುತ್ತದೆ ಎಂದು ತಿಳಿಸಿದ್ದು ಟ್ವೀಟ್ ಮಾಡಿದ್ದಾರೆ. ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸಹ ಇದನ್ನು ರಿ-ಟ್ವೀಟ್ ಮಾಡಿದ್ದು ಅಧಿಕೃತ ಎಂದು ಘೋಷಿಸಿದ್ದಾರೆ.
ಒಟ್ಟಿನಲ್ಲಿ ದೇಶವನ್ನು ಪ್ರತಿನಿಧಿಸಬೇಕು, ಶೂಟಿಂಗ್ ನಲ್ಲಿ ಸಾಧನೆ ಮಾಡಬೇಕು ಎಂದು ನಿರಂತರ ಪರಿಶ್ರಮಪಡುತ್ತಿದ್ದ ಯುವತಿಗೆ ಸ್ವತಃ ಶೂಟರ್ ಆಗಿಯೇ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಇಂದಿನ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸ್ಪಂದಿಸಿದ್ದಾರೆ. ಜರ್ಮನಿಗೆ ತೆರಳುತ್ತಿರುವ ಪ್ರಿಯಾಗೆ ನಮ್ಮ ಕಡೆಯಿಂದಲೂ ಗುಡ್ ಲಕ್..
