ನವದೆಹಲಿ(ಏ.20): ಪ್ರತಿ ತಂಡವೂ ತವರು ಕ್ರೀಡಾಂಗಣದಲ್ಲಿ ಆಡಲು ಇಚ್ಛಿಸುತ್ತದೆ. ಅಲ್ಲಿನ ಅಭಿಮಾನಿಗಳು, ಪಿಚ್‌ ಎಲ್ಲವೂ ತವರು ತಂಡಕ್ಕೆ ಲಾಭ ತರಲಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಾತ್ರ ತವರು ಮೈದಾನ ಅದೃಷ್ಟತಾಣವಾಗಿಲ್ಲ. 

ತಂಡ 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಇಲ್ಲಿ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಸೋತಿದೆ. ಶನಿವಾರ ಫಿರೋಜ್‌ ಶಾ ಕೋಟ್ಲಾದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಸೆಣಸಲಿದ್ದು, ಕ್ಯಾಪಿಟಲ್ಸ್‌ ಅದೃಷ್ಟ ಬದಲಾಗುವ ನಿರೀಕ್ಷೆಯಲ್ಲಿದೆ.

ಡೆಲ್ಲಿ ಹಾಗೂ ಪಂಜಾಬ್‌ ತಂಡಗಳ ಸ್ಥಿತಿ ವಿಭಿನ್ನವಾಗಿಲ್ಲ. ಎರಡೂ ತಂಡಗಳು ಆಡಿರುವ 9 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 4ರಲ್ಲಿ ಸೋತಿವೆ. ಪ್ಲೇ-ಆಫ್‌ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದೆನಿಸಿದೆ.

ಕೋಟ್ಲಾ ಪಿಚ್‌ ಪ್ರತಿ ಪಂದ್ಯದಲ್ಲೂ ಟೀಕೆಗೆ ಒಳಗಾಗುತ್ತಿದೆ. ನಿಧಾನಗತಿಯ ಪಿಚ್‌ನಲ್ಲಿ ರನ್‌ ಹರಿದು ಬರುತ್ತಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಉಭಯ ನಾಯಕರು ತಂಡ ಸಂಯೋಜನೆ ಮಾಡಿಕೊಳ್ಳಬೇಕಿದೆ. ಕ್ರಿಸ್‌ ಗೇಲ್‌, ಕೆ.ಎಲ್‌.ರಾಹುಲ್‌ ವಿರುದ್ಧ ಕಗಿಸೋ ರಬಾಡ ಎಷ್ಟು ಪರಿಣಾಮಕಾರಿ ದಾಳಿ ನಡೆಸಬಲ್ಲರು ಎನ್ನುವ ಕುತೂಹಲ ಒಂದು ಕಡೆಯಾದರೆ, ಪಂಜಾಬ್‌ ನಾಯಕ ಆರ್‌.ಅಶ್ವಿನ್‌ರ ವಿಭಿನ್ನ ತಂತ್ರಗಾರಿಕೆಯ ವಿರುದ್ಧ ಅಸ್ಥಿರ ಡೆಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಕಾಣಬಹುದು ಎನ್ನುವ ಕುತೂಹಲ ಮತ್ತೊಂದು ಕಡೆ.

ವಿಶ್ವಕಪ್‌ ಹತ್ತಿರವಾಗುತ್ತಿದ್ದಂತೆ ಭಾರತೀಯ ಆಟಗಾರರು ಲಯ ಕಾಯ್ದುಕೊಳ್ಳಬೇಕಾದ ಒತ್ತಡದಲ್ಲಿದ್ದು ಶಿಖರ್‌ ಧವನ್‌, ರಾಹುಲ್‌, ಮೊಹಮದ್‌ ಶಮಿ ಮೇಲೆ ಎಲ್ಲರ ಕಣ್ಣಿದೆ. ಇದೇ ವೇಳೆ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದ ರಿಷಭ್‌ ಪಂತ್‌ ಹೇಗೆ ಆಡಲಿದ್ದಾರೆ ಎನ್ನುವ ಕುತೂಹಲವೂ ಕಾಡುತ್ತಿದೆ.

ಪಿಚ್‌ ರಿಪೋರ್ಟ್‌

ಕೋಟ್ಲಾ ಪಿಚ್‌ ನಿಧಾನಗತಿಯ ಬೌಲಿಂಗ್‌ಗೆ ನೆರವು ನೀಡಲಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಇಲ್ಲಿ ರನ್‌ ಗಳಿಸುವುದು ಸವಾಲಾಗಿ ಪರಿಣಮಿಸಲಿದೆ. ಮೊದಲು ಬ್ಯಾಟ್‌ ಮಾಡುವ ತಂಡ 170ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಒಟ್ಟು ಮುಖಾಮುಖಿ: 23

ಡೆಲ್ಲಿ: 09

ಪಂಜಾಬ್‌: 14

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಪೃಥ್ವಿ, ಧವನ್‌, ಕಾಲಿನ್‌ ಮನ್ರೊ, ಶ್ರೇಯಸ್‌ (ನಾಯಕ), ರಿಷಭ್‌ ಪಂತ್‌, ಅಕ್ಷರ್‌, ಕ್ರಿಸ್‌ ಮೋರಿಸ್‌, ಪೌಲ್‌, ರಬಾಡ, ಮಿಶ್ರಾ, ಇಶಾಂತ್‌.

ಪಂಜಾಬ್‌: ಗೇಲ್‌, ರಾಹುಲ್‌, ಮಯಾಂಕ್‌, ಮಿಲ್ಲರ್‌, ಪೂರನ್‌, ಮನ್‌ದೀಪ್‌, ಅಶ್ವಿನ್‌ (ನಾಯಕ), ಮುಜೀಬ್‌, ಶಮಿ, ಎಂ.ಅಶ್ವಿನ್‌, ಆಶ್‌ರ್‍ದೀಪ್‌.

ಸ್ಥಳ: ನವದೆಹಲಿ 

ಪಂದ್ಯ ಆರಂಭ: ರಾತ್ರಿ 8ಕ್ಕೆ 

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1