ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ಅನಿಲ್‌ ಕುಂಬ್ಳೆ ನಡುವೆ ಮನಸ್ತಾಪ ಶುರುವಾಗಿದ್ದು, ಕುಂಬ್ಳೆ ಅಭ್ಯಾಸ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದಾಗ ವಿರಾಟ್‌ ಹೊರನಡೆದರು ಎನ್ನುವ ಊಹಾಪೂಹ ದೂರವಾಗಿದೆ. ಶುಕ್ರವಾರ ಮಳೆ ಕಾರಣ, ಭಾರತ ತಂಡ ಒಳಾಂಗಣ ಅಭ್ಯಾಸ ನಡೆಸಿತು. ಈ ವೇಳೆ ಸ್ವತಃ ಕುಂಬ್ಳೆ, ನೆಟ್ಸ್‌ನಲ್ಲಿ ವಿರಾಟ್‌ ಕೊಹ್ಲಿಗೆ ಬೌಲಿಂಗ್‌ ಮಾಡಿದರು.
ಬರ್ಮಿಂಗ್'ಹ್ಯಾಮ್(ಜೂ.03): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವೆ ಮನಸ್ತಾಪ ಶುರುವಾಗಿದ್ದು, ಕುಂಬ್ಳೆ ಅಭ್ಯಾಸ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದಾಗ ವಿರಾಟ್ ಹೊರನಡೆದರು ಎನ್ನುವ ಊಹಾಪೂಹ ದೂರವಾಗಿದೆ. ಶುಕ್ರವಾರ ಮಳೆ ಕಾರಣ, ಭಾರತ ತಂಡ ಒಳಾಂಗಣ ಅಭ್ಯಾಸ ನಡೆಸಿತು. ಈ ವೇಳೆ ಸ್ವತಃ ಕುಂಬ್ಳೆ, ನೆಟ್ಸ್ನಲ್ಲಿ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿದರು.
ಕುಂಬ್ಳೆ ಹಾಗೂ ಕೊಹ್ಲಿ ನಡುವಿನ ಜಗಳ ಕಳೆದ ಕೆಲ ದಿನಗಳಿಂದ ಪ್ರಮುಖ ಸುದ್ದಿಯಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಅಭ್ಯಾಸದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ವಿವಾದಗಳಿಗೂ ತೆರೆ ಎಳೆದಂತಾಗಿದೆ. ಕೊಹ್ಲಿ ಜತೆ ಭಾನುವಾರದ ಮಹತ್ವದ ಪಂದ್ಯದ ಕುರಿತು ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದ ಕುಂಬ್ಳೆ ಆನಂತರ 20 ನಿಮಿಷಗಳ ಕಾಲ ಅವರಿಗೆ ಬೌಲಿಂಗ್ ಮಾಡಿದರು. ಆನಂತರ ಯುವರಾಜ್ ಸಿಂಗ್ ಅಭ್ಯಾಸ ನಡೆಸುತ್ತಿದ್ದ ನೆಟ್ಸ್ಗೆ ತೆರಳಿದ ಕೊಹ್ಲಿ, ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಅವರ ಬೌಲಿಂಗ್ಗೆ ಅಭ್ಯಾಸ ನಡೆಸಲು ಆರಂಭಿಸಿದರು.
ಜ್ವರದ ಕಾರಣ ಮೊದಲೆರೆಡು ಅಭ್ಯಾಸ ಪಂದ್ಯಗಳನ್ನು ತಪ್ಪಸಿಕೊಂಡಿದ್ದ ಯುವರಾಜ್ ಸಿಂಗ್, ಚೇತರಿಕೆ ಕಂಡಿದ್ದು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಸೆಹ್ವಾಗ್ ಅರ್ಜಿ ಸಲ್ಲಿಸಲು ಕೊಹ್ಲಿ ಕಾರಣ?: ಇದೇ ವೇಳೆ ಭಾರತ ತಂಡದ ಕೋಚ್ ಆಗಲು, ವೀರೇಂದ್ರ ಸೆಹ್ವಾಗ್ಗೆ ಅರ್ಜಿ ಸಲ್ಲಿಸುವಂತೆ ವಿರಾಟ್ ಕೊಹ್ಲಿ ಕೇಳಿಕೊಂಡಿದ್ದರು ಎನ್ನುವ ಸುದ್ದಿ ಹಬ್ಬಿದೆ. ಕುಂಬ್ಳೆ ಕಾರ್ಯವೈಖರಿ ಬಗ್ಗೆ ಬಿಸಿಸಿಐ ಜತೆ ಅಸಮಾಧಾನ ತೋಡಿಕೊಂಡ ಬಳಿಕ ಕೊಹ್ಲಿ, ಸೆಹ್ವಾಗ್ ಅವರನ್ನು ಭೇಟಿ ಮಾಡಿ ಅರ್ಜಿ ಹಾಕುವಂತೆ ಕೇಳಿಕೊಂಡಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿದೆ.
ಗಂಗೂಲಿಯಿಂದ ಆಟಗಾರರ ಭೇಟಿಯೂ ವದಂತಿ!
ಭಾರತ ತಂಡಕ್ಕೆ ನೂತನ ಕೋಚ್ ಹುಡುಕಾಟದಲ್ಲಿರುವ ಬಿಸಿಸಿಐ, ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಅವರಿಗೆ ಆಟಗಾರರನ್ನು ಭೇಟಿ ಮಾಡಿ ಹಾಲಿ ಕೋಚ್ ಕುಂಬ್ಳೆ ಬಗ್ಗೆ ಪ್ರತಿಕ್ರಿಯೆ ಸಂಗ್ರಹಿಸಲು ಸೂಚಿಸಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಅದರಂತೆಯೇ ಗಂಗೂಲಿ ಆಟಗಾರರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೌರವ್ ಗಂಗೂಲಿ ‘ನನಗೆ ಆಟಗಾರರನ್ನು ಭೇಟಿ ಮಾಡುವಂತೆ ಯಾರೂ ಸೂಚಿಸಿಲ್ಲ. ನಾನು ಆಟಗಾರರನ್ನು ಭೇಟಿ ಮಾಡಿಲ್ಲ. ನಾನೇಕೆ ಅವರನ್ನು ಭೇಟಿ ಮಾಡಲಿ' ಎಂದಿದ್ದಾರೆ.
