ಅಕ್ಟೋಬರ್ 3ಕ್ಕೆ KSCA ಚುನಾವಣೆ
ಬಹುನಿರೀಕ್ಷಿತ KSCA ಚುನಾವಣೆಗೆ ದಿನಾಂಕ ಕೂಡಿ ಬಂದಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಆಡಳಿತ ಮಂಡಳಿ ಸದಸ್ಯರ ಸ್ಥಾನ (11 ಸ್ಥಾನಗಳು)ಗಳಿಗೆ ಚುನಾವಣೆ ಅಕ್ಟೋಬರ್ 03ರಂದು ನಡೆಯಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು(ಸೆ.27): ಬಹು ನಿರೀಕ್ಷಿತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 3ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ ಎಂದು ಗುರುವಾರ ಚುನಾವಣಾ ಅಧಿಕಾರಿ ಎಂ.ಆರ್.ಹೆಗ್ಡೆ ಪ್ರಕಟಣೆ ಮೂಲಕ ತಿಳಿಸಿದರು. ಅ.3ರಂದು ರಾಜ್ಯ ಕ್ರಿಕೆಟ್ ಸಂಸ್ಥೆಯ 82ನೇ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದ್ದು, ಅಂದೇ ಚುನಾವಣೆ ಸಹ ನಡೆಯಲಿದೆ.
BCCI ಚುನಾವಣೆ: ಕೆಎಸ್‌ಸಿಎಗೆ ಮತ ಹಕ್ಕು
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಆಡಳಿತ ಮಂಡಳಿ ಸದಸ್ಯರ ಸ್ಥಾನ (11 ಸ್ಥಾನಗಳು)ಗಳಿಗೆ ಚುನಾವಣೆ ನಡೆಯಲಿದೆ. 2019-2022ರ ಅವಧಿಗೆ ಈ ಚುನಾವಣೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೆಎಸ್‌ಸಿಎಯಿಂದ ಮಾನ್ಯತೆ ಪಡೆದ ಕ್ಲಬ್‌ಗಳ ಕಾರ್ಯದರ್ಶಿಗಳು, ಜೀವಮಾನದ ಸದಸ್ಯರು ಮತ ಚಲಾಯಿಸಲಿದ್ದಾರೆ. ಒಟ್ಟು 1600ರಿಂದ 1700 ಮತಗಳಿವೆ.
ಮೊದಲ ಬಾರಿಗೆ ಇವಿಎಂ ಬಳಕೆ
ಶುಕ್ರವಾರ (ಸೆ.27)ದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಸೋಮವಾರ ಮಧ್ಯಾಹ್ನ 3 ಗಂಟೆ ವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಸೆ.29ರಂದು ಭಾನುವಾರ ಕಚೇರಿಗೆ ರಜೆ ಇರಲಿದೆ. ಸೆ.30ರಂದು ಮಧ್ಯಾಹ್ನ 3ರಿಂದ ಸಂಜೆ 6ರ ವರೆಗೂ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಚುನಾವಣಾ ಕಣದಿಂದ ಹಿಂದೆ ಸರಿಯಲು ಇಚ್ಛಿಸುವವರು ಅ.1ರಂದು ನಾಮಪತ್ರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೂ ನಾಮಪತ್ರ ಹಿಂಪಡೆಯಬಹುದಾಗಿದೆ.
ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನೆರವು; ಅಭಿಯಾನದಲ್ಲಿ ಕೊಹ್ಲಿ, ಶಾಸ್ತ್ರಿ!
ಅ.1ರ ಮಧ್ಯಾಹ್ನ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟ ಮಾಡಲಾಗುತ್ತದೆ. ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಇದೇ ಮೊದಲ ಬಾರಿ ಎಲೆಕ್ಟ್ರಾನಿಕ್ ಮತ ಯಂತ್ರವನ್ನು (ಇವಿಎಂ) ಬಳಸಲಾಗುತ್ತಿದೆ.
ಯಾವ್ಯಾವ ಸ್ಥಾನಗಳಿಗೆ ಚುನಾವಣೆ?
ಅಧ್ಯಕ್ಷ
ಉಪಾಧ್ಯಕ್ಷ
ಕಾರ್ಯದರ್ಶಿ
ಜಂಟಿ ಕಾರ್ಯದರ್ಶಿ
ಖಜಾಂಚಿ
ಆಡಳಿತ ಮಂಡಳಿ ಸದಸ್ಯರು (11 ಸ್ಥಾನಗಳು)
ಚುನಾವಣಾ ಪ್ರಕ್ರಿಯೆ ವೇಳಾಪಟ್ಟಿ
ಸೆ.27-30 ನಾಮಪತ್ರ ಸಲ್ಲಿಕೆ
ಸೆ.30 ನಾಮಪತ್ರ ಪರಿಶೀಲನೆ
ಅ.1 ನಾಮಪತ್ರ ಹಿಂಪಡೆಯುವಿಕೆ
ಅ.1 ಅಭ್ಯರ್ಥಿಗಳ ಅಂತಿಮ ಪಟ್ಟಿಪ್ರಕಟ
ಅ.3 ಚುನಾವಣೆ, ಫಲಿತಾಂಶ ಪ್ರಕಟ