"

ಮೈಸೂರು(ಆ.30): ಕೆಪಿಎಲ್ ಲೀಗ್ ಟೂರ್ನಿಯ 2ನೇ ಕ್ವಾಲಿಫೈಯರ್ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು. ಫೈನಲ್ ಪಂದ್ಯದಲ್ಲಿ ಬಳ್ಳಾರಿ ಎದುರಾಳಿ ಯಾರು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 26 ರನ್ ಗೆಲವು ಸಾಧಿಸಿದ ಹುಬ್ಳಿ ಟೈಗರ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇತ್ತ ಬೆಳಗಾವಿ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಆಗಸ್ಟ್ 31 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಬಳ್ಳಾರಿ ಟಸ್ಕರ್ಸ್ ಹಾಗೂ ಹುಬ್ಳಿ ಟೈಗರ್ಸ್ ಹೋರಾಟ ನಡೆಸಲಿದೆ.

ಇದನ್ನೂ ಓದಿ: ವಿದ್ಯಾರ್ಥಿ ಭವನದಲ್ಲಿ ಬೆಣ್ಣೆ ದೋಸೆ ಸವಿದ ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗ್!

ಮೊದಲು ಬ್ಯಾಟಿಂಗ್ ಮಾಡಿದ ಹುಬ್ಳಿ ಟೈಗರ್ಸ್ ತಂಡಕ್ಕೆ ಮೊಹಮ್ಮದ್ ತಾಹ ಆಸರೆಯಾದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ರನ್ ಹರಿದು ಬರಲಿಲ್ಲ. ಲವ್ನೀತ್ ಸಿಸೋಡಿಯಾ 4, ಭರವಸೆ ಮೂಡಿಸಿರುವ ನಾಯಕ ವಿನಯ್ ಕುಮಾರ್ 9 ರನ್ ಸಿಡಿಸಿ ನಿರ್ಗಮಿಸಿದರು. ಕೆಬಿ ಪವನ್ ಜೊತೆಗೂಡಿದ ಮೊಹಮ್ಮದ್ ತಾಹ ಹಾಫ್ ಸೆಂಚುರಿ ಸಿಡಿಸಿದರು.

ಮೊಹಮ್ಮದ್ ತಾಹ 63 ರನ್ ಸಿಡಿಸಿ ಔಟಾದರು. ಪವನ್ 31 ರನ್ ಕಾಣಿಕೆ ನೀಡಿದರು. ಪ್ರವೀಣ್ ದುಬೆ 29 ರನ್ ನೆರವಿನಿಂದ ಹುಬ್ಳಿ ಟೈಗರ್ಸ್ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 154 ರನ್ ಸಿಡಿಸಿತು. 

ಇದನ್ನೂ ಓದಿ: KPL ಕ್ರಿಕೆಟ್: ನೆರೆ ಸಂತ್ರಸ್ತರಿಗೆ ಬೆಳಕಾದ ಬೆಳಗಾವಿ ಪ್ಯಾಂಥರ್ಸ್!

155 ರನ್ ಗುರಿ ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ ದಿಢೀರ್ ಕುಸಿತ ಕಂಡಿತು. ರವಿ ಸಮರ್ಥ್ 4 ರನ್ ಸಿಡಿಸಿ ಔಟಾದರು. ಸ್ಟಾಲಿನ್ ಹೂವರ್ 12, ಅವಿನಾಶ್ ಡಿ 13 ರನ್ ಸಿಡಿಸಿ ಔಟಾದರು. ಆದರೆ ಅಭಿನವ್ ಮನೋಹರ್ ಏಕಾಂಗಿ ಹೋರಾಟ ನೀಡಿದರು.  ಕೊನೈನ ಅಬ್ಬಾಸ್, ರಿತೇಶ್ ಭಟ್ಕಳ್ ಹಾಗೂ ಅರ್ಶದೀಪ್ ಸಿಂಗ್ ಬಾರ್ ಅಬ್ಬರಿಸಿಲ್ಲ. ಅಭಿನವ್ ಮನೋಹರ್ 38 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: ಪ್ರತಿ ಸಿಕ್ಸರ್‌ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!

ಶುಭಾಂಗ್ ಹೆಗ್ಡೆ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೆಳಗಾವಿ ತಿರುಗೇಟು ನೀಡೋ ಪ್ರಯತ್ನ ಮಾಡಿತು. ಅಂತಿಮ 6 ಎಸೆತದಲ್ಲಿ ಬೆಳಗಾವಿ ಗೆಲುವಿಗೆ 29 ರನ್ ಅವಶ್ಯಕತೆ ಇತ್ತು. ಶುಭಾಂಗ್ 25 ರನ್ ಸಿಡಿಸಿ ಔಟಾದರು. ಶ್ರೀಶಾ ಆಚಾರ್ ವಿಕೆಟ್ ಪತನದೊಂದಿಗೆ ಬೆಳಗಾವಿ ಪ್ಯಾಂಥರ್ಸ್ 19.4 ಓವರ್‌ಗಳಲ್ಲಿ 128 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಹುಬ್ಳಿ 26 ರನ್ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.