ಬೆಂಗಳೂರು(ಆ.21): ಆರಂಭಿಕ ಆಟಗಾರ ನಾಯಕ ಭರತ್ ಚಿಪ್ಲಿ (77) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮೈಸೂರು ವಾರಿಯರ್ಸ್ ವಿರುದ್ಧ ನಡೆದ ಕೆಪಿಎಲ್ ಲೀಗ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ಮೊದಲ ಗೆಲುವು ಕಂಡಿದೆ. 8 ವಿಕೆಟ್ ಗೆಲುವು ಸಾಧಿಸಿದ ಬುಲ್ಸ್ ಮೈದಾನದಲ್ಲಿ ಸಂಭ್ರಮ ಆಚರಿಸಿದರೆ, ಇತ್ತ ಮೈಸೂರು ವಾರಿಯರ್ಸ್ ಸತತ ಸೋಲಿನಿಂದ ಕಂಗೆಟ್ಟಿದೆ. 

ಇದನ್ನೂ ಓದಿ:  KPL ಟೂರ್ನಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ !

ಸಾಧಾರಣ ಮೊತ್ತಕ್ಕೆ ಮೈಸೂರು ತೃಪ್ತಿ
ಈ ಬಾರಿಯ ಕರ್ನಾಟ ಪ್ರೀಮಿಯರ್ ಲೀಗ್ ನಲ್ಲಿ ಮೈಸೂರು ವಾರಿಯರ್ಸ್ ತಂಡದ ಅದೃಷ್ಟ ನೆಟ್ಟಗಿಲ್ಲ.  ಕಾರಣ ಇದುವರೆಗೆ 3 ಪಂದ್ಯ ಆಡಿದ ಮೈಸೂರು ತಂಡಕ್ಕೆ ಇನ್ನೂ ಗೆಲುವು ಸಿಕ್ಕಿಲ್ಲ. ಮೈಸೂರಿಗೆ ಮಳೆ ಕೂಡ ಅಡ್ಡಿಯಾಗಿಲ್ಲ. ಇಷ್ಟಾದರೂ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ ಅನ್ನೋ ಕೊರಗು ಅಭಿಮಾನಿಗಳನ್ನು ಕಾಡುತ್ತಿದೆ. 

ಬಿಜಾಪುರ ಬುಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ವಾರಿಯರ್ಸ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು. ಕೆವಿ ಸಿದ್ಧಾರ್ಥ ಅಜೇಯ 73 ರನ್ ಗಳಿಸಿ ತಂಡದ ಮಾನ ಕಾಪಾಡಿದರು.   ಆರಂಭಿಕ ಆಟಗಾರ ಸಿದ್ಧಾರ್ಥ್ 55 ಎಸೆತಗಳನ್ನೆದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಕೊನೆ ಓವರ್ ವರೆಗೂ ತಂಡಕ್ಕೆ ನೆರವಾಗಿ ನಿಂತರು. ಆದರೆ ಇತರ  ಬ್ಯಾಟ್ಸ್‌ಮನ್‌ಗಳು ಬುಲ್ಸ್ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗದೆ ರನ್ ಗಳಿಸಲು ಪರದಾಡಿದರು. 

ಇದನ್ನೂ ಓದಿ: ಪ್ರತಿ ಸಿಕ್ಸರ್‌ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!

ಆರಂಭಿಕ ಆಟಗಾರ ಡಿ. ನಿಶ್ಚಲ್ ಅವರ ವೈಫಲ್ಯದ ಹೆಜ್ಜೆ ಮುಂದುವರಿದಿದೆ. ಕೇವಲ 1 ರನ್ ಗಳಿಸಿ ಪ್ರತೀಕ್ ಜೈನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಅಮಿತ್ ವರ್ಮಾ ಕೂಡ ಈ ಬಾರಿ ಖಾತೆ ತೆರೆಯದೆ ಪೆವಿಲಿಯನ್ ಹಾದಿ ಹಿಡಿದರು. ನವೀನ್ ಬೌಲಿಂಗ್ ನಲ್ಲಿ ಹಿಟ್ ವಿಕೆಟ್ ಗೆ ಬಲಿಯಾಗುವ ಮೂಲಕ ಮೈಸೂರು ತಂಡದ ನಾಯಕ ವಿಕೆಟ್ ಒಪ್ಪಿಸಿದರು. ಮಂಜೇಶ್ ರೆಡ್ಡಿ 23 ಎಸೆತಗಳಲ್ಲಿ 23 ರನ್ ಗಳಿಸಿದರೆ, ಉತ್ತಮ ಬ್ಯಾಟಿಂಗ್ ಪ್ರರ್ಶಿಸುವ ಸಾಮರ್ಥ್ಯ ಹೊಂದಿರುವ ಶೊಯೇಬ್ ಮ್ಯಾನೇಜರ್ 27 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 28 ರನ್ ಗಳಿಸಿ ಜೈನ್ ಗೆ ವಿಕೆಟ್ ಒಪ್ಪಿಸಿದರು. ಪ್ರತೀಕ್ ಜೈನ್ 16 ರನ್ ಗೆ 2 ವಿಕೆಟ್ ಗಳಿಸಿ ಬಿಜಾಪುರ ಬುಲ್ಸ್ ಪರ ಯಶಸ್ವಿ ಬೌಲರ್ ಎನಿಸಿದರು. ನವೀನ್ ಹಾಗೂ ಕಾಮತ್ ತಲಾ 1 ವಿಕೆಟ್ ಗಳಿಸಿ ಮೈಸೂರು ರನ್ ಗಳಿಕೆಗೆ ಕಡಿವಾಣ ಹಾಕಿದರು.

ಸಾಧಾರಣ ಮೊತ್ತವನ್ನು ಬೆಂಬತ್ತಿದ ಬುಲ್ಸ್ ಪರ ನಾಯಕ ಭರತ್ ಚಿಪ್ಲಿ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 77 ರನ್ ಸಿಡಿಸಿ ತಂಡದ ಜಯಕ್ಕೆ ಭದ್ರ ತಳಪಾಯ ಹಾಕಿದರು. ಇನ್ನೊಂದೆಡೆ ಜ್ಞಾನೇಶ್ವರ ನವೀನ್ (45) ಜವಾಬ್ದಾರಿಯುತ ಆಟ ಪ್ರದರ್ಶಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಬಿಜಾಪುರ ಬುಲ್ಸ್ ಇನ್ನೂ 5.2 ಓವರ್ ಬಾಕಿ ಇರುವಾಗಲೇ 144 ರನ್ ಗಳಿಸಿ, 8 ವಿಕೆಟ್ ಅಂತರದಲ್ಲಿ ಜಯ ಗಳಿಸಿತು.