ಕೋಲಾರ(ಆ.20): ಕರ್ನಾಟಕದ ವಿವಿಧ ಭಾಗಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ), ಸದ್ಯದಲ್ಲೇ ಕೋಲಾರ ಜಿಲ್ಲೆಯಲ್ಲೂ ಕ್ರೀಡಾಂಗಣ ನಿರ್ಮಿಸಲಿದೆ. ತಾಲೂಕಿನ ಹೊಳಲಿ ಗ್ರಾಮದಲ್ಲಿನ 16 ಎಕರೆ ಸರ್ಕಾರಿ ಗೋಮಾಳ ಜಮೀನನ್ನು 30 ವರ್ಷಗಳಿಗೆ ಗುತ್ತಿಗೆ ಆಧಾರದ ಮೇಲೆ ಕೆಎಸ್‌ಸಿಎಗೆ ನೀಡಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸೋಮವಾರ ಆದೇಶಿಸಿದ್ದಾರೆ.

ಸೆಪ್ಟೆಂಬರ್ 14ರೊಳಗೆ ಚುನಾವಣೆ ನಡೆಸಿ: ರಾಜ್ಯ ಸಂಸ್ಥೆಗೆ ಬಿಸಿಸಿಐ

ಗ್ರಾಮದ ಸರ್ವೆ ನಂಬರ್‌ 103ರಲ್ಲಿ 16 ಎಕರೆ ಜಮೀನನ್ನು ಸ್ಟೇಡಿಯಂ ನಿರ್ಮಿಸಲು ಮಂಜೂರು ಮಾಡುವಂತೆ ಕೆಎಸ್‌ಸಿಎ ಮನವಿ ಸಲ್ಲಿಸಿತ್ತು. ಸರ್ಕಾರ ಇದಕ್ಕೆ ಸಮ್ಮತಿ ಸೂಚಿಸಿ ಪ್ರಚಲಿತ ಮಾರುಕಟ್ಟೆ ದರದ ಶೇ.10ರಷ್ಟು ವಾರ್ಷಿಕ ದರ ನಿಗದಿ ಪಡಿಸಿ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ.

KPL ಟ್ರೋಫಿ ಲಾಂಚ್; ಪ್ರವಾಹ ಸಂತ್ರಸ್ತರಿಗೆ KSCA ನೆರವಿನ ಭರವಸೆ!

2 ಪಿಚ್‌ ನಿರ್ಮಾಣ

ಇಲ್ಲಿನ ಕ್ರೀಡಾಂಗಣದಲ್ಲಿ 2 ಟರ್ಫ್ ಪಿಚ್‌ ನಿರ್ಮಿಸುವುದಾಗಿ ಕೆಎಸ್‌ಸಿಎ ತಿಳಿಸಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ‘ಬೆಂಗಳೂರಿನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗುವಷ್ಟೆ ದೂರ ಕೋಲಾರದ ಹೊಳಲಿಯ ಕ್ರೀಡಾಂಗಣಕ್ಕೂ ಆಗಲಿದೆ. ಕೆಪಿಎಲ್‌ ಸೇರಿದಂತೆ ಇನ್ನಿತರ ದೇಸಿ ಪಂದ್ಯಗಳನ್ನು ಇಲ್ಲಿ ನಡೆಸಬಹುದಾಗಿದೆ. ಅಲ್ಲದೆ ತರಬೇತಿ ಶಿಬಿರಗಳನ್ನು ಆಯೋಜಿಸಲು ಸೂಕ್ತ ಸ್ಥಳ. ದೇವನಹಳ್ಳಿ ಬಳಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಸ್ಥಾಪನೆಗೊಳ್ಳುತ್ತಿದ್ದು, ಆ ಸ್ಥಳಕ್ಕೂ ಹೊಳಲಿ ಕ್ರೀಡಾಂಗಣ ಹತ್ತಿರವಾಗಲಿದೆ’ ಎಂದು ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿದರು.