Asianet Suvarna News Asianet Suvarna News

ಸೋಲಿನ ಬಳಿಕ ತಂಡಕ್ಕೆ ಕೊಹ್ಲಿ ಕ್ಲಾಸ್..!

ಪ್ರಮುಖವಾಗಿ ತಂಡದ ನಾಲ್ಕೈದು ಆಟಗಾರರ ಬಗ್ಗೆ ವಿರಾಟ್ ಬೇಸರ ವ್ಯಕ್ತಪಡಿಸಿದ್ದು, ಟಿ20 ಯುಗದಲ್ಲಿ ಟೆಸ್ಟ್‌'ನ ಮಹತ್ವವೇನು ಎನ್ನುವುದನ್ನು ವಿವರಿಸಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

Kohli slams team vents ire at media after Centurion debacle

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲು ಭಾರತೀಯ ಆಟಗಾರರನ್ನು ಮುಜುಗರಕ್ಕೆ ಗುರಿಪಡಿಸಿದೆ. ಪ್ರಮುಖವಾಗಿ ನಾಯಕ ವಿರಾಟ್ ಕೊಹ್ಲಿಗೆ ಈ ಸೋಲು ಭಾರೀ ಬೇಸರ ಮೂಡಿಸಿದ್ದು, ತಂಡದ ಪ್ರಮುಖ ಆಟಗಾರರ ಅತಿಯಾದ ಆತ್ಮವಿಶ್ವಾಸ, ಬೇಜವಾಬ್ದಾರಿತನದ ಬಗ್ಗೆ ಸಿಟ್ಟು ಮಾಡಿಕೊಂಡಿದ್ದಾರೆ.

ಸೆಂಚೂರಿಯನ್‌'ನಲ್ಲಿ ನಡೆದ 2ನೇ ಟೆಸ್ಟ್ ಸೋತ ಬಳಿಕ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್, ಜವಾಬ್ದಾರಿಯಿಂದ ಆಡುವಲ್ಲಿ ನಾವು ಎಡವಿದ್ದೇವೆ. ಈ ರೀತಿಯ ಧೋರಣೆ ಸಲ್ಲದು. ನಾನು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಸುದೀರ್ಘ ಸಭೆ: ಸೋಲಿನ ಮರುದಿನ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ, ತಂಡದೊಂದಿಗೆ ದಿನವಡೀ ಸಭೆ ನಡೆಸಿದ್ದಾರೆ. ಇಡೀ ದಿನ ಆಟಗಾರರು ಹೋಟೆಲ್ ಬಿಟ್ಟು ಹೊರಬರಲಿಲ್ಲ ಎನ್ನಲಾಗಿದೆ. ಜತೆಗೆ ಕೊಹ್ಲಿ ಪ್ರತಿಯೊಬ್ಬ ಆಟಗಾರನೊಂದಿಗೂ ಪ್ರತ್ಯೇಕವಾಗಿ ಚರ್ಚಿಸಿದ್ದು, ಅವರ ಜವಾಬ್ದಾರಿಗಳೇನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ತಂಡದ ನಾಲ್ಕೈದು ಆಟಗಾರರ ಬಗ್ಗೆ ವಿರಾಟ್ ಬೇಸರ ವ್ಯಕ್ತಪಡಿಸಿದ್ದು, ಟಿ20 ಯುಗದಲ್ಲಿ ಟೆಸ್ಟ್‌'ನ ಮಹತ್ವವೇನು ಎನ್ನುವುದನ್ನು ವಿವರಿಸಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಸರಣಿಯಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌'ಮನ್‌'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಸೆಂಚೂರಿಯನ್‌'ನಲ್ಲಿ ಪೂಜಾರ ಎರಡೂ ಇನ್ನಿಂಗ್ಸ್'ಗಳಲ್ಲಿ ರನೌಟ್ ಆಗಿದ್ದು, ತಂಡದ ಆಡಳಿತದ ಬೇಸರಕ್ಕೆ ಕಾರಣವಾಗಿದೆ. ಇನ್ನು ತಂಡದ ಸೋಲಿನಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ ಎಡವಟ್ಟಿನ ಪಾತ್ರವೂ ಪ್ರಮುಖವಾಗಿತ್ತು.

ಲಂಕಾ ಸರಣಿ ಬೇಡವೆಂದಿದ್ದ ಆಟಗಾರರು!:

ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಶ್ರೀಲಂಕಾ ವಿರುದ್ಧ ಸರಣಿಯನ್ನು ಮೊಟಕುಗೊಳಿಸುವಂತೆ ಆಟಗಾರರು ಮನವಿ ಮಾಡಿದ್ದರು. ಆದರೆ ಇದನ್ನು ಬಿಸಿಸಿಐ ಪುರಸ್ಕರಿಸಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘44 ದಿನಗಳ ಕಾಲ ಸುದೀರ್ಘ ಪ್ರವಾಸದಲ್ಲಿ ಲಂಕಾ, ಭಾರತ ವಿರುದ್ಧ 3 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿತ್ತು. ಕೊನೆ ಪಕ್ಷ ಟೆಸ್ಟ್ ಸರಣಿ ಬದಲು 6 ಏಕದಿನ ಪಂದ್ಯಗಳ ಸರಣಿ ನಡೆಸಲು ಆಟಗಾರರು ಕೇಳಿಕೊಂಡಿದ್ದರು. ಇಲ್ಲವೇ ಟಿ20

ಸರಣಿಯನ್ನಾದರೂ ರದ್ದುಗೊಳಿಸಿ ಎಂದು ಮನವಿ ಮಾಡಿದ್ದರು. ಆದರೆ ವ್ಯವಹಾರ ಹಾಗೂ ಲಂಕಾ ಮಂಡಳಿ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿಯಲು ಕ್ರಿಕೆಟ್ ಬೋರ್ಡ್ ಇಚ್ಛಿಸಲಿಲ್ಲ. ಬಿಸಿಸಿಐನ ಈ ನಿರ್ಧಾರ ಆಟಗಾರರಿಗೆ ನೋವುಂಟು ಮಾಡಿತು’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಫ್ರಿಕಾ ಪ್ರವಾಸ ಮುಗಿಸಿ ತವರಿಗೆ ವಾಪಸಾಗುತ್ತಿದ್ದಂತೆ, ಭಾರತ ಮತ್ತೊಮ್ಮೆ ಲಂಕಾಕ್ಕೆ ತೆರಳಲಿದೆ. ಅಲ್ಲಿನ ಲಂಕಾ, ಬಾಂಗ್ಲಾ ಜತೆ ತ್ರಿಕೋನ ಟಿ20 ಸರಣಿಯಲ್ಲಿ ಆಡಲಿದೆ.

Follow Us:
Download App:
  • android
  • ios