ಐಪಿಎಲ್'ನಲ್ಲಿ ಮತ್ತೊಂದು ಸ್ಮರಣೀಯ ಇನ್ನಿಂಗ್ಸ್ ಕಟ್ಟಿದ ಮನೀಶ್ ಪಾಂಡೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ನವದೆಹಲಿ(ಏ.17): ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಡೆಲ್ಲಿ ಬೌಲಿಂಗ್ ಹಾಗೂ ಕೋಲ್ಕತಾ ಬ್ಯಾಟಿಂಗ್ ನಡುವಿನ ಕಾದಾಟದಲ್ಲಿ ಕೊನೆಗೂ ಬ್ಯಾಟಿಂಗ್ ಪರಾಕ್ರಮ ಮೆರೆಯಿತು. ಐಪಿಎಲ್ 10ನೇ ಆವೃತ್ತಿಯಲ್ಲಿ ಅಮೋಘ ಫಾರ್ಮ್'ನಲ್ಲಿರುವ ಕನ್ನಡಿಗ ಮನೀಶ್ ಪಾಂಡೆ ಕೋಲ್ಕತಾ ನೈಟ್'ರೈಡರ್ಸ್'ಗೆ ಮತ್ತೊಂದು ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್'ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗೌತಮ್ ಗಂಭೀರ್ ನೇತೃತ್ವದ ಕೋಲ್ಕತಾ ನೈಟ್'ರೈಡರ್ಸ್ ಪಡೆ ನಾಲ್ಕು ವಿಕೆಟ್'ಗಳ ಜಯ ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಡೇರ್'ಡೆವಿಲ್ಸ್ ತಂಡ ನಿಗದಿತ 20 ಓವರ್'ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 168ರನ್'ಗಳ ಸವಾಲಿನ ಮೊತ್ತ ಪೇರಿಸಿತು.

ಸವಾಲಿನ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್'ರೈಡರ್ಸ್ ಪಡೆ ಆರಂಭಿಕ ಆಘಾತ ಅನುಭವಿಸಿದರೂ ಮನೀಶ್ ಪಾಂಡೆ (ಅಜೇಯ 69) ಹಾಗೂ ಯೂಸೂಪ್ ಪಠಾಣ್(59) ಬಾರಿಸಿದ ಸಮಯೋಚಿತ ಶತಕದ ಜತೆಯಾಟದ ನೆರವಿನಿಂದ ರೋಚಕವಾಗಿ ನಾಲ್ಕು ವಿಕೆಟ್'ಗಳ ಜಯ ಸಾಧಿಸಿತು.

ಐಪಿಎಲ್'ನಲ್ಲಿ ಮತ್ತೊಂದು ಸ್ಮರಣೀಯ ಇನ್ನಿಂಗ್ಸ್ ಕಟ್ಟಿದ ಮನೀಶ್ ಪಾಂಡೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:

ಡೆಲ್ಲಿ ಡೇರ್'ಡೆವಿಲ್ಸ್: 168/7

ಸಂಜು ಸ್ಯಾಮ್ಸನ್: 39

ರಿಷಭ್ ಪಂತ್: 38

ನಾಥನ್ ಕೌಂಟರ್-ನೈಲ್: 22/3

ಕೋಲ್ಕತಾ ನೈಟ್'ರೈಡರ್ಸ್: 169/6

ಮನೀಶ್ ಪಾಂಡೆ: 69

ಯೂಸೂಪ್ ಪಠಾಣ್: 59

ಜಹೀರ್ ಖಾನ್: 28/2