ಕೋಲ್ಕತ[ಮಾ.15]: ಕೋಲ್ಕತಾ ನೈಟ್’ರೈಡರ್ಸ್ ತಂಡದ ವೇಗಿ ಕಮಲೇಶ್ ನಾಗರಕೋಟಿ ಗಾಯದ ಸಮಸ್ಯೆಯಿಂದ ಮತ್ತೊಮ್ಮೆ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು ಮತ್ತೋರ್ವ ವೇಗಿ ಶಿವಂ ಮಾವಿ ಕೂಡಾ 12ನೇ ಆವೃತ್ತಿಯ ಐಪಿಎಲ್’ನಿಂದ ಹೊರಬಿದ್ದಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಈ ಇಬ್ಬರು ಆಟಗಾರರು ತಂಡದಿಂದ ಹೊರಬಿದ್ದಿದ್ದು ಕೆಕೆಆರ್ ಪಾಲಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

IPL 2019ರ ಹರಾಜಿನ ಬಳಿಕ KKR ತಂಡ ಹೀಗಿತ್ತುಕೆಕೆಆರ್ ಫುಲ್ ಟೀಂ: ಕೇವಲ ಒಬ್ಬ ಬ್ಯಾಟ್ಸ್’ಮನ್ ಖರೀದಿಸಿದ 2 ಆವೃತ್ತಿಯ ಚಾಂಪಿಯನ್..!

ಕಮಲೇಶ್ ನಾಗರಕೋಟಿ ಪಾದದ ಗಾಯದಿಂದಾಗಿ ಹೊರಬಿದ್ದಿದ್ದರೆ, ಶಿವಂ ಮಾವಿ ಬೆನ್ನು ನೋವಿನ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ 2019ರ ಹರಾಜಿನಲ್ಲಿ ಸೇಲ್ ಆಗದೇ ಉಳಿದಿದ್ದ ಕೇರಳ ವೇಗಿ ಸಂದೀಪ್ ವಾರಿಯರ್ ಅವರನ್ನು ಕೆಕೆಆರ್ ಪ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿದೆ. ತ್ರಿಶೂರ್ ಮೂಲದ ಸಂದೀಪ್ 2018-19ನೇ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ ಕೇರಳ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಇದಷ್ಟೇ ಅಲ್ಲದೇ ಕಳೆದ ಆವೃತ್ತಿ ರಣಜಿ ಟೂರ್ನಿಯಲ್ಲೂ ಕೇರಳ ಪರ ಗರಿಷ್ಠ ವಿಕೆಟ್ ಪಡೆದಿದ್ದ ಸಂದೀಪ್ ವಾರಿಯರ್, 2019ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಂಧ್ರ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು.  

2018ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ನಾಗರಕೋಟಿ ಹಾಗೂ ಶಿವಂ ಮಾವಿ ಭಾರತ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮೂಲಕ ಪೃಥ್ವಿ ಶಾ ನಾಯಕತ್ವದ ಕಿರಿಯರ ಟೀಂ ಇಂಡಿಯಾ ನಾಲ್ಕನೇ ಬಾರಿಗೆ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ನಾಗರಕೋಟಿಯನ್ನು ಕೆಕೆಆರ್ ಪ್ರಾಂಚೈಸಿ 3.2 ಕೋಟಿ ನೀಡಿ ಖರೀದಿಸಿತ್ತು. ಕಳೆದ ಆವೃತ್ತಿಯಲ್ಲಿ ಶಿವಂ ಮಾವಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರಿಂದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೆಕೆಆರ್ ತಂಡ ಕೂಡಿಕೊಂಡಿದ್ದರು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಪ್ರಸಿದ್ದ್ 7 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು.