ನವದೆಹಲಿ(ಏ.23): ಸಾಧಾರಣ ಗುರಿ ಮುಟ್ಟುವಲ್ಲಿ ವಿಫಲವಾದ ಡೆಲ್ಲಿ ಡೇರ್ ಡೇವಿಲ್ಸ್ ತಂಡ ಕೊನೆಯ ಎಸೆತದಲ್ಲಿ ಪಂಜಾಬ್'ಗೆ ಶರಣಾಗಿ 4 ರನ್'ಗಳ ಸೋಲು ಒಪ್ಪಿಕೊಂಡಿತು.

ಪಂಜಾಬ್ ನೀಡಿದ 144 ರನ್'ಗಳ ಸವಾಲನ್ನು ಬೆನ್ನಟ್ಟಿದ ಗಂಭೀರ್ ಪಡೆಗೆ ಶ್ರೇಯಸ್ ಅಯ್ಯರ್ ಕೊನೆಯವರೆಗೂ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಅಂತಿಮ ಎಸೆತದಲ್ಲಿ 5 ರನ್'ಗಳು ಬೇಕಿದ್ದವು. ಬ್ಯಾಟ್ ಬೀಸಿದ ಅಯ್ಯರ್ ಚಂಡು ಫಿಂಚ್ ಕೈ ಸೇರಿ ಪಂದ್ಯ ಪಂಜಾಬ್ ಪಾಲಾಯಿತು.

45 ಎಸೆತಗಳನ್ನು ಎದುರಿಸಿದ ಅಯ್ಯರ್ 5 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 57 ರನ್ ಗಳಿಸಿದರು. ಶಾ (22),ತೆವಾಟಿಯಾ(24) ಬಿಟ್ಟರೆ ಉಳಿದವರು ಆಟವಾಡಲಿಲ್ಲ. 20 ಓವರ್'ಗಳಲ್ಲಿ 139/8 ಗಳಿಸಲಷ್ಟೆ ಶಕ್ತವಾಯಿತು. ಪಂಜಾಬ್ ಪರ ರಜಪೂತ್, ತೇಯಿ ಹಾಗೂ ರೆಹಮಾನ್ ತಲಾ 2 ವಿಕೇಟ್ ಗಳಿಸಿ ಯಶಸ್ವಿಯಾದರು.

ಗೇಲ್ ಅನುಪಸ್ಥಿತಿ

ಟಾಸ್ ಗೆದ್ದ ಡೆಲ್ಲಿ ಡೇರ್'ಡೇವಿಲ್ಸ್ ತಂಡ ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿತು. ಗೇಲ್ ಅನುಪಸ್ಥಿತಿಯಲ್ಲಿ ರಾಹುಲ್ ಅವರೊಂದಿಗೆ ಫಿಂಚ್ ಇನಿಂಗ್ಸ್ ಆರಂಭಿಸಿದರಾದರೂ ಕೇವಲ 2 ರನ್ ಗಳಿಸಿ ಔಟಾದರು. ರಾಹುಲ್ ಕೂಡ ಹೆಚ್ಚು ಹೊತ್ತು ನಿಲ್ಲದೆ 23(15) ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು.

ಕರ್ನಾಟಕ ಬ್ಯಾಟ್ಸ್'ಮೆನ್'ಗಳಾದ ಮಾಯಾಂಕ್(21), ಕರುಣ್ ನಾಯರ್ (34) ಹಾಗೂ ಡೇವಿಡ್ ಮಿಲ್ಲರ್(26) ಆಟ ಮಾತ್ರ ಕೆಲ ಕಾಲ ಮಿಂಚಿಳಿಸಿತು. ಪಂಜಾಬ್ ಪರ ಯಾವೊಬ್ಬ ಬ್ಯಾಟ್ಸ್'ಮೆನ್ ಕೂಡ ಸ್ಫೋಟಕ ಆಟವಾಡಲಿಲ್ಲ. ಕೊನೆಯದಾಗಿ 20 ಓವರ್'ಗಳಲ್ಲಿ 143/8 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಡೆಲ್ಲಿ ಪರ ಪ್ಲಂಕೆಟ್ 17/3, ಬೋಲ್ಟ್ 21/2, ಅವೇಶ್ ಖಾನ್ 36/2 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

 

ಸ್ಕೋರ್

ಪಂಜಾಬ್ 20 ಓವರ್'ಗಳಲ್ಲಿ 143/8

(ನಾಯರ್ 34, ಮಿಲ್ಲರ್ 26, ಪ್ಲಂಕೆಟ್ 17/3)

 

ಡೆಲ್ಲಿ ಡೇರ್ ಡೇವಿಲ್ಸ್ 20 ಓವರ್'ಗಳಲ್ಲಿ 139/8

(ಶ್ರೇಯಸ್ ಅಯ್ಯರ್  57)

ಫಲಿತಾಂಶ: ಪಂಜಾಬ್'ಗೆ 4 ರನ್'ಗಳ ಜಯ