2015ರಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಂ.1 ಪಟ್ಟ ಅಲಂಕರಿಸಿದ್ದ ಸೈನಾ ನೆಹ್ವಾಲ್ ಈ ಸಾಧನೆ ಮಾಡಿದ ಭಾರತದ ಮೊದಲ ಶಟ್ಲರ್ ಎನಿಸಿದ್ದರು. ಸೈನಾ ನಂತರ ಶ್ರೀಕಾಂತ್ ಈ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಹೈದರಾಬಾದ್(ಏ.11): ಭಾರತದ ತಾರಾ ಶಟ್ಲರ್ ಕಿದಾಂಬಿ ಶ್ರೀಕಾಂತ್, ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಲಿದ್ದಾರೆ.ಗುರುವಾರ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ನೂತನ ಶ್ರೇಯಾಂಕ ಪಟ್ಟಿ ಪ್ರಕಟ ಮಾಡಲಿದೆ. ಇದರೊಂದಿಗೆ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ಮೊದಲ ಪುರುಷ ಶಟ್ಲರ್ ಎನ್ನುವ ದಾಖಲೆಯನ್ನು ಶ್ರೀಕಾಂತ್ ಬರೆಯಲಿದ್ದಾರೆ.

2015ರಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಂ.1 ಪಟ್ಟ ಅಲಂಕರಿಸಿದ್ದ ಸೈನಾ ನೆಹ್ವಾಲ್ ಈ ಸಾಧನೆ ಮಾಡಿದ ಭಾರತದ ಮೊದಲ ಶಟ್ಲರ್ ಎನಿಸಿದ್ದರು. ಸೈನಾ ನಂತರ ಶ್ರೀಕಾಂತ್ ಈ ಹಿರಿಮೆಗೆ ಪಾತ್ರರಾಗಲಿದ್ದಾರೆ.

76,895 ಅಂಕ ಕಲೆಹಾಕಿರುವ ಶ್ರೀಕಾಂತ್, ಸದ್ಯ ಅಗ್ರಸ್ಥಾನದಲ್ಲಿರುವ ವಿಶ್ವ ಚಾಂಪಿಯನ್ ಡೆನ್ಮಾರ್ಕ್‌'ನ ವಿಕ್ಟರ್ ಅಕ್ಸೆಲ್ಸನ್‌'ರನ್ನು ಶ್ರೀಕಾಂತ್ ಹಿಂದಿಕ್ಕಲಿದ್ದಾರೆ. ವಿಕ್ಟರ್ ಸದ್ಯ 77,130 ಅಂಕಗಳನ್ನು ಹೊಂದಿದ್ದು, ಗಾಯದ ಕಾರಣ ಈ ವರ್ಷ ಮಲೇಷ್ಯಾ ಓಪನ್‌'ಗೆ ಗೈರಾಗಲಿರುವ ಕಾರಣ 1660 ಅಂಕಗಳನ್ನು ಕಳೆದುಕೊಂಡು ಶ್ರೇಯಾಂಕ ಪಟ್ಟಿಯಲ್ಲಿ ಕೆಳಗಿಳಿಯಲಿದ್ದಾರೆ. 52 ವಾರಗಳ ಅವಧಿಯಲ್ಲಿ ನಡೆಯಲಿರುವ 10 ಶ್ರೇಷ್ಠ ಪಂದ್ಯಾವಳಿಗಳಲ್ಲಿ ಗಳಿಸಿದ ಶ್ರೇಯಾಂಕ ಅಂಕಗಳ ಆಧಾರದ ಮೇಲೆ ಆಟಗಾರರಿಗೆ ಶ್ರೇಯಾಂಕ ನೀಡಲಾಗುತ್ತದೆ.

ಗೋಲ್ಡ್‌'ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌'ನ ಮಿಶ್ರ ತಂಡ ವಿಭಾಗದಲ್ಲಿ ಭಾರತ ಐತಿಹಾಸಿಕ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಿದಾಂಬಿ ಶ್ರೀಕಾಂತ್, ಪುರುಷರ ಸಿಂಗಲ್ಸ್ ವಿಭಾಗದಲ್ಲೂ ಚಿನ್ನ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ.