ಪುಣೆ(ಜ.11): ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಕರ್ನಾಟಕದ ಈಜುಪಟುಗಳು ಸ್ಪರ್ಧೆ ನಡೆದ ಮೊದಲ ದಿನವೇ ಪ್ರಾಬಲ್ಯ ಮೆರೆದಿದ್ದಾರೆ. ಗುರುವಾರದ ಸ್ಪರ್ಧೆಯಲ್ಲಿ ರಾಜ್ಯ ಈಜುಪಟುಗಳು 4 ಚಿನ್ನ, 3 ಬೆಳ್ಳಿ, 2 ಕಂಚಿನೊಂದಿಗೆ 9 ಪದಕ ಗೆದ್ದು ಉತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೇ ಈಜು ವಿಭಾಗದ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. 

ಅಂಡರ್-17 ಬಾಲಕರ 200 ಮೀ. ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಸಂಜಯ್ ಜಯಕೃಷ್ಣನ್ 1:59.06 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ತಾರಾ ಈಜುಪಟು ಶ್ರೀಹರಿ ನಟರಾಜು 1:53.22 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಪಸುಮ ಕುಶಾಲ್ ಬೆಳ್ಳಿ ಗೆದ್ದರು. ಅಂಡರ್ -21 ಬಾಲಕಿರ 100 ಮೀ. ಬ್ರೆಸ್ಟ್‌ಸ್ಟ್ರೋಕ್’ನಲ್ಲಿ ಲಿಖಿತ್ ಎಸ್.ಪಿ. ಚಿನ್ನ ಗೆದ್ದರು. ಮಹಿಳೆಯರ 200ಮೀ. ಫ್ರೀ ಸ್ಟೈಲ್‌ನಲ್ಲಿ ಖುಷಿ ದಿನೇಶ್ ಬೆಳ್ಳಿ ಗೆದ್ದರು. 100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ರಚನಾ ರಾವ್ ಕಂಚು ಜಯಿಸಿದರು. 50 ಮೀ. ಬಟರ್‌ಫ್ಲೈನಲ್ಲಿ ನೀನಾ ವೆಂಕಟೇಶ್ ಚಿನ್ನಕ್ಕೆ ಮುತ್ತಿಟ್ಟರು. ಸುವನಾ ಭಾಸ್ಕರ್ ಬೆಳ್ಳಿ ಗೆದ್ದರು. ಅಂಡರ್-21 ಬಾಲಕಿಯರ ವಿಭಾಗದ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ರಾಜ್ಯದ ಹರ್ಷಿತಾ ಕಂಚು ಗೆದ್ದರು.

ವೇಟ್‌ಲಿಫ್ಟಿಂಗ್: ಜಾಕೋಬ್‌ಗೆ ಚಿನ್ನ, ಬೆಳ್ಳಿ: ಅಂಡರ್-17 ಪುರುಷರ ಸ್ಪರ್ಧೆಯಲ್ಲಿ ಜಾಕೋಬ್ (61 ಕೆ.ಜಿ) ಚಿನ್ನ ಮತ್ತು ಅಂಡರ್-21 ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಅಂಡರ್-21 ಪುರುಷರ ಸ್ಪರ್ಧೆಯಲ್ಲಿ ಮಿಜೋರಾಂನ ಝಕುಮಾ ಚಿನ್ನ ಗೆದ್ದರು. ತಮಿಳುನಾಡಿನ ಎನ್.ಎಸ್.ಅಭಿಷೇಕ್ ಕಂಚು ಗೆದ್ದರು. ಅಂಡರ್-17 ಪುರುಷರ ಸ್ಪರ್ಧೆಯಲ್ಲಿ ಜೆರೆಮಿ ಲಲ್ರಿನ್ನುಂಗಾ (67ಕೆ.ಜಿ) ಚಿನ್ನ ಮತ್ತು ಅಂಡರ್-21 ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಅಂಡರ್-21 ಗ್ರಿಕೋ-ರೋಮನ್ 72 ಕೆಜಿ ಪುರುಷರ ಕುಸ್ತಿಯಲ್ಲಿ ರಾಜಸ್ಥಾನ ಕುಸ್ತಿಪಟು ಚಗನ್ ಚಿನ್ನದ ಪದಕ ಗೆದ್ದಿದ್ದಾರೆ.