ಖೇಲೋ ಇಂಡಿಯಾ: ಚಿನ್ನ ಗೆದ್ದ ರಾಜ್ಯದ ಸಂಜಯ್, ಪೂಜಾ
ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟು ಸಂಜಯ್, ಬಾಲಕಿಯರ ಕುಸ್ತಿಯಲ್ಲಿ ಪೂಜಾ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕ ಸದ್ಯ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಖೇಲೋ ಇಂಡಿಯಾದಲ್ಲಿ ಕನ್ನಡಿಗರು ಪ್ರದರ್ಶನದ ಹೈಲೈಟ್ಸ್ ಇಲ್ಲಿದೆ.
ಪುಣೆ(ಝ.13): 2ನೇ ಆವೃತ್ತಿಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಕೂಟದ 3ನೇ ದಿನವಾದ ಶನಿವಾರ ಕರ್ನಾಟಕ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿತು. ಒಟ್ಟಾರೆ 12 ಚಿನ್ನ, 13 ಬೆಳ್ಳಿ ಹಾಗೂ 10 ಕಂಚಿನೊಂದಿಗೆ ರಾಜ್ಯ ಪದಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ಬಾಕ್ಸಿಂಗ್: ಭಾರತದ ಮೇರಿ ಕೋಮ್ ನಂ.1
ಶನಿವಾರವೂ ರಾಜ್ಯದ ಈಜುಪಟುಗಳ ಪ್ರಾಬಲ್ಯ ಮುಂದುವರಿಯಿತು. ಅಂಡರ್-17 ಬಾಲಕರ 400 ಮೀ. ಫ್ರೀಸ್ಟೈಲ್‌ನಲ್ಲಿ ಸಂಜಯ್ ಚಿನ್ನ ಜಯಿಸಿದರೆ, ಮೋಹಿತ್ ವೆಂಕಟೇಶ್ ಕಂಚು ಗೆದ್ದರು. ಅಂಡರ್-21 ಬಾಲಕರ ಬಟರ್‌ಫ್ಲೈ ವಿಭಾಗದಲ್ಲಿ ಅವಿನಾಶ್ ಬೆಳ್ಳಿ, ಅಂಡರ್-17 ಬಾಲಕಿಯರ ಫ್ರೀಸ್ಟೈಲ್‌ನಲ್ಲಿ ದೀಕ್ಷಾ ರಮೇಶ್ ಬೆಳ್ಳಿ ಜಯಿಸಿದರು. ಅಂಡರ್-17 ಬಾಲಕರ 4/100 ಮೀ ಮೆಡ್ಲೆಯಲ್ಲಿ ರಾಜ್ಯ ತಂಡ ಕಂಚು ಗೆದ್ದರೆ, ಅಂಡರ್-21 ಬಾಲಕರ 4/100 ಮೀ.ಮೆಡ್ಲೆ ಸ್ಪರ್ಧೆಯಲ್ಲಿ ಕರ್ನಾಟಕ ಚಿನ್ನ ಜಯಿಸಿತು.
ಇದನ್ನೂ ಓದಿ: ಬ್ಯಾಡ್ಮಿಂಟನ್ ಲೀಗ್: ಬೆಂಗಳೂರು ಫೈನಲ್‌ಗೆ
ಬಾಲಕಿಯರ 68 ಕೆ.ಜಿ ಕುಸ್ತಿಯಲ್ಲಿ ಪೂಜಾ ಚಿನ್ನ ಜಯಿಸಿದರೆ, ಬಾಲಕರ 74 ಕೆ.ಜಿ ಕುಸ್ತಿಯಲ್ಲಿ ಶ್ರೀನಿವಾಸ್ ಬೆಳ್ಳಿ ಗೆದ್ದರು. ಅಂಡರ್-21 ಬಾಲಕರ ಜಿಮ್ನಾಸ್ಟಿಕ್ಸ್‌ನಲ್ಲಿ ಉಜ್ವಲ್ ನಾಯ್ಡು ಚಿನ್ನಕ್ಕೆ ಮುತ್ತಿಟ್ಟರು. ಬಾಲಕಿಯರ 52 ಕೆ.ಜಿ ವಿಭಾಗದ ಜುಡೋ ಸ್ಪರ್ಧೆಯಲ್ಲಿ ಅನಿತಾ ಕಂಚಿನ ಪದಕ ಜಯಿಸಿದರು.